ಬೆಂಗಳೂರು: ಬಿಬಿಎಂಪಿ ಸದಸ್ಯರ ಅವಧಿ ಮುಗಿದ ಬಳಿಕ ಆಡಳಿತಗಾರರ ಪರ್ವ ಶುರುವಾಗಿದೆ. ಇಂದು ಅಧಿಕಾರಿ ಹಾಗೂ ಸಾರ್ವಜನಿಕರ ನಡುವೆ ಮೊದಲ ಜಟಾಪಟಿ ನಡೆದಿದೆ. ಬಳಿಕ ಸ್ಥಳಕ್ಕೆ ಬಂದ ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಪರಿಸ್ಥಿತಿ ತಿಳಿಗೊಳಿಸಿ, ಆಯುಕ್ತರಿಗೆ ದೂರು ನೀಡಿ ಅಧಿಕಾರಿಯನ್ನು ವಾಪಸ್ ಕಳುಹಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ತೆರವು ವಿಚಾರ: ನೋಡಲ್ ಅಧಿಕಾರಿ ವಿರುದ್ಧ ತಿರುಗಿಬಿದ್ದ ಜನ
ನೋಡಲ್ ಅಧಿಕಾರಿ ವಾರ್ಡ್-46 ಜೆಸಿ ನಗರ ವ್ಯಾಪ್ತಿಯಲ್ಲಿ ಬಡವರು ಹಾಗೂ ಬೀದಿಬದಿ ವ್ಯಾಪಾರಿಗಳ ಅಂಗಡಿಗಳು, ತಳ್ಳುವ ಗಾಡಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಮಾಜಿ ಪ್ರತಿಪಕ್ಷ ನಾಯಕ ವಾಜಿದ್ ಅಸಮಾಧಾನ ಹೊರಹಾಕಿದ್ದಾರೆ.
ಬಳಿಕ ಮಾತನಾಡಿದ ಬೈರತಿ ಸುರೇಶ್ ಅವರು, ಪಾಲಿಕೆ ಸದಸ್ಯರು, ಮೇಯರ್ ಅವಧಿ ಮುಗಿದ ಬಳಿಕ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಜೆಸಿ ನಗರ ವಾರ್ಡ್ ನೋಡಲ್ ಅಧಿಕಾರಿಯನ್ನಾಗಿ ರವೀಂದ್ರ ಅವರನ್ನು ನೇಮಿಸಲಾಗಿದೆ. ಆದರೆ, ಬೇರೆ ಕೆಲಸ ಬಿಟ್ಟು, ಜೆಸಿಬಿ ಮೂಲಕ ಬಡವರ ಮನೆಗಳು, ಅಂಗಡಿಗಳನ್ನು ಒಡೆಯಲು ಬಂದಿದ್ದರು. ಎಲ್ಲಾ ಸಾರ್ವಜನಿಕರು ಸೇರಿ ರಸ್ತೆ ತಡೆ ನಡೆಸಿದರು ಎಂದರು.
ಆಯುಕ್ತರು ಕೂಡಾ ಅಧಿಕಾರಿ ಮಾಡಿರುವ ಕೆಲಸ ಸರಿಯಲ್ಲ. ನೋಡಲ್ ಅಧಿಕಾರಿಗಳ ಕೆಲಸ ಜನರ ಸಮಸ್ಯೆ ಪರಿಹರಿಸಬೇಕೇ ಹೊರತು, ಜನರಿಗೆ ಸಮಸ್ಯೆ ಕೊಡುವುದಲ್ಲ ಎಂದಿದ್ದಾರೆ. ಈಗಾಗಲೇ ಕೊರೊನಾ ಬಂದು ನರಳುತ್ತಿರುವ ಬಡವರಿಗೆ ಅಧಿಕಾರಿ ತೊಂದರೆ ಕೊಟ್ಟಿದ್ದಾರೆ. ಈ ರೀತಿ ಎಲ್ಲೇ ಸಮಸ್ಯೆ ಉಂಟಾದರೂ ನನ್ನ ಗಮನಕ್ಕೆ ತನ್ನಿ, ಆಯುಕ್ತರು, ಆಡಳಿತಗಾರರಿಗೆ ದೂರು ನೀಡುತ್ತೇನೆ ಎಂದು ಶಾಸಕ ಬೈರತಿ ಸುರೇಶ್ ಜನರಿಗೆ ಭರವಸೆ ನೀಡಿದರು.