ಆನೇಕಲ್: ಆನೇಕಲ್ ಹೃದಯ ಭಾಗಕ್ಕೆ ತಮಿಳುನಾಡಿನಿಂದ ಬರುವ ಮುಖ್ಯ ರಸ್ತೆಯ ಅಗಲ ಬಹಳ ಕಿರಿದಾಗಿದ್ದು, ಪ್ರಯಾಣಿಕರು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.
ತಲೆತಲಾಂತರದಿಂದ ಪಟ್ಟಣದ ಕೇಂದ್ರವಾಗಿರುವ ಆನೇಕಲ್ ಬೆಂಗಳೂರು ಆಗ್ನೇಯ ಭಾಗದಲ್ಲಿ ನೆಲೆಯೂರಿದೆ. ದಟ್ಟ ಬನ್ನೇರುಘಟ್ಟ ಕಾನನದ ಅಂಚಿನಲ್ಲಿರುವ ಆನೇಕಲ್ ಬೆಂಗಳೂರಿಗೂ ಮೊದಲು ಇಲ್ಲಿ ಜನವಾಸ್ತವ್ಯ ಇತ್ತು ಎನ್ನುವುದಕ್ಕೆ ಶಿಲಾಯುಗದ ಕುರುಹುಗಳಿವೆ. ಅಲ್ಲದೇ ರಾಜ್ಯ ರಾಜಧಾನಿಯ ಗಡಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಆನೇಕಲ್-ತಳಿ ಮುಖ್ಯರಸ್ತೆ ಅಗಲೀಕರಣದ ಕೂಗಿಗೂ ಶತಮಾನಗಳು ಕಳೆದಿವೆ. ಪುರಸಭೆಯಿಂದ ಕೇಂದ್ರ ಮಂತ್ರಿಯವರೆಗೂ ಆಯ್ಕೆಯಾಗಿರುವ ಜನಪ್ರತಿನಿಧಿ ಎ ನಾರಾಯಣಸ್ವಾಮಿ, ಶೆಟ್ಟಹಳ್ಳಿಯ ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ ಮತ್ತು ಮಾಜಿ ಅರಣ್ಯ ಸಚಿವ ಎಂಪಿ ಕೇಶವ ಮೂರ್ತಿಯ ತವರೂರು ಆನೇಕಲ್ ಅಗಿದೆ. ಹೀಗೆ ಸಾಲು ಸಾಲು ಮಂತ್ರಿಗಿರಿ ಕೊಟ್ಟ ಆನೇಕಲ್ ಹೃದಯಭಾಗಕ್ಕೆ ತಮಿಳುನಾಡಿಂದ ಬರುವ ಮುಖ್ಯರಸ್ತೆಯ ಅಗಲ ಕೇವಲ 15-16 ಅಡಿಗಷ್ಟೇ ಸೀಮಿತಗೊಂಡಿದೆ.
ಪ್ರವಾಸಿ ತಾಣ ಮುತ್ಯಾಲಮಡುವಿಗೂ ಇದೇ ರಸ್ತೆ ಮೂಲಕ ಸಾಗಬೇಕು. ಬೆಳಗ್ಗೆ-ಸಂಜೆ ವಾಹನಗಳು ಮೇಲಿಂದ ಮೇಲೆ ಸಾಗಲು ಇದೇ ರಸ್ತೆ ಗತಿ ಎಂಬಂತಿದೆ. ಈ ಇಕ್ಕಟ್ಟಾದ ರಸ್ತೆ ಸಾಲದೆ ಪರದಾಡುವ ಪರಿಸ್ಥಿತಿಯಿದೆ. ಅದರಲ್ಲೂ ಮುತ್ಯಾಲಮಡುವಿನ ಸುತ್ತಲಿರುವ ಕಲ್ಲು ಕ್ವಾರಿಗಳ ಟಿಪ್ಪರ್ಗಳ ಹಾವಳಿಗೆ ರಸ್ತೆ ಕಚ್ಛಾ ರಸ್ತೆಯಾಗಿ ಮಾರ್ಪಟ್ಟಿದೆ. ಬೇಸಿಗೆಯಲ್ಲಿ ವಿಪರೀತ ಧೂಳು, ಮಳೆಗಾಲದಲ್ಲಿ ಕೆಸರುಗದ್ದೆಯಾಗುವ ರಸ್ತೆ ಸ್ಥಿತಿ ಹೇಳತೀರದಾಗಿದೆ. ಚುನಾವಣಾ ಪೂರ್ವದಲ್ಲಿ ನಾಲ್ಕಾರು ಬಾರಿ ರಸ್ತೆ ಕಾಮಗಾರಿ ಪೂಜೆ ನೆರವೇರಿಸಿ, ಗೆದ್ದ ನಂತರ ರಸ್ತೆಗೆ ಎಳ್ಳು ನೀರು ಬಿಟ್ಟಿರುವ ದಾಖಲೆ ಜನಮಾನಸದಲ್ಲಿದೆ.
ಇದನ್ನೂ ಓದಿ:ನಿಮ್ಮ ಶಾಸಕರೇ ಹಾದಿ ಬೀದಿಯಲ್ಲಿ ನಿಂತು ಸಿಎಂ ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಟೀಕಿಸಿದನ್ನ ಮರೆತುಬಿಟ್ರಾ? ಹೆಚ್‌ಡಿಕೆ ಪ್ರಶ್ನೆ
ಕಿರಿದಾದ ರಸ್ತೆ ಸಮಸ್ಯೆಗೆ ಮುಕ್ತಿ ನೀಡಲು ಸ್ವಯಂ ಪ್ರೇರಿತರಾಗಿ ಅಲ್ಲಿನ ಜನರು ರಸ್ತೆ ಅಗಲೀಕರಣಕ್ಕೆ ಅವಕಾಶ ಕಲ್ಪಿಸಿ ಎಂದು ಸರ್ಕಾರದಿಂದ ಬರುವ ಪರಿಹಾರದ ಹಣವನ್ನು 13 ಕುಟುಂಬಗಳು ಈಗಾಗಲೇ ಪಡೆದು ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೂ ಕೆಲ ನಿವಾಸಿಗಳ ದಾಖಲೆ ಸಮಸ್ಯೆಯ ನೆಪ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದೆ. ಆದಷ್ಟು ಬೇಗ ಈ ರಸ್ತೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಅಲ್ಲಿನ ವಾಹನ ಸವಾರರ ಹಾಗು ನಿವಾಸಿಗಳ ಒತ್ತಾಯವಾಗಿದೆ.