ಬೆಂಗಳೂರು: ಕೇಂದ್ರ ಸರ್ಕಾರ ಕ್ರಿಮಿನಲ್‌ಗಳು ಮಾಡುವಂತಹ ಕೆಲಸದಲ್ಲಿ ನಿರತವಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪೆಗಾಸಸ್ ಸ್ಪೈವೇರ್ ಮೂಲಕ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡುವ ಕೇಂದ್ರದ ದುಷ್ಟ ಬುದ್ಧಿ ಜಗತ್ತಿನ ಮುಂದೆ ಬೆತ್ತಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೂ ಕಣ್ಗಾವಲು ನಡೆಸಿರುವುದು ಕ್ರಿಮಿನಲ್‌ಗಳು ಮಾಡುವಂತ ಕೆಲಸ. ಕೇಂದ್ರದ ಆಯಕಟ್ಟಿನ ಜಾಗದಲ್ಲಿ ಕ್ರಿಮಿನಲ್‌ಗಳೇ ಇರುವಾಗ ಕ್ರಿಮಿನಲ್ ಕೆಲಸವಲ್ಲದೆ ಒಳ್ಳೆ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಅಸಮರ್ಥ ನಾಯಕನಿಗೆ ಸದಾ ಅಸ್ತಿತ್ವದ ಭಯ ಕಾಡುತ್ತದೆ. ಮೋದಿಯವರಿಗೂ ಈಗ ಅಸ್ತಿತ್ವದ ಭಯವಿದೆ. ಹಾಗಾಗಿ ಪೆಗಾಸಸ್ ಮೂಲಕ ಮುಖ್ಯ ನ್ಯಾಯಮೂರ್ತಿ, ರಾಜಕೀಯ ನಾಯಕರು ಹಾಗೂ ಪತ್ರಕರ್ತರ ಚಲನವಲನಗಳ ಮೇಲೆ ಕಣ್ಗಾವಲು ಇಡುವ ಹೀನ ಕೆಲಸಕ್ಕೆ ಕೈ ಹಾಕಿದ್ದಾರೆ. ಕೇಂದ್ರದ ಈ ಕೃತ್ಯ, ವ್ಯಕ್ತಿಗಳ ಖಾಸಗಿ ಹಕ್ಕಿನ ಉಲ್ಲಂಘನೆಯ ಜೊತೆ ಅಪರಾಧ ಕೂಡ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವರಿಗೆ ಮದ್ದು ಹಾಕುವ ಕೆಟ್ಟ ರೋಗವಿರುತ್ತದೆ. ಅವರಿಗೆ ಮದ್ದು ಹಾಕಲು ಯಾರೂ ಸಿಗದಿದ್ದರೆ ಕೊನೆಗೆ ಮನೆಯವರಿಗೆ ಮದ್ದು ಹಾಕುತ್ತಾರೆ. ನಳಿನ್ ಕುಮಾರ್ ಕಟೀಲು ಅವರ ಸಿಎಂ ಬದಲಾವಣೆ ಆಡಿಯೋ ಲೀಕ್ ಹಿಂದೆಯೂ ಕೇಂದ್ರದ ಕೈವಾಡವಿರಬಹುದು. ಕಟೀಲ್‌ರವರೇ ನಿಮ್ಮ ಆಡಿಯೋ ಲೀಕ್ ಹಿಂದಿನ ರಹಸ್ಯವೇನು ಎಂಬುದನ್ನು ಒಮ್ಮೆ ಅಮಿತ್ ಶಾ ಬಳಿ ಕೇಳಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ದಿಲ್ಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ತೆರಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.