ಬೆಂಗಳೂರು:ಪ್ರಸ್ತುತ ಅಪಘಾತದಲ್ಲಿ ಪಾದಚಾರಿಗಳು ಮೃತಪಟ್ಟರೆ 304 ಎ (ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇನ್ಮುಂದೆ 307 ಸೆಕ್ಷನ್ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
304A ಜೊತಗೆ 307 ಸೇರಿಸುವುದಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವತ್ಥನಾರಾಯಣ್ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಅಪಘಾತವಾದ ಬಳಿಕ ಬಂದು ಕ್ಷಮಿಸಿ, ತಪ್ಪಾಯ್ತು ಎಂದರೆ ಸಹಿಸುವುದಿಲ್ಲ. ಅವುಗಳಿಗೆ ಕಡಿವಾಣಕ್ಕೆ ಮತ್ತಷ್ಟು ಪಾದಚಾರಿ ಸೇತುವೆಗಳ ನಿರ್ಮಾಣಕ್ಕೆ ಡಿಸಿಎಂ ಸೂಚಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾವಂತರು ನೋ ಪಾರ್ಕಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ರೀತಿ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಪರಿಣಾಮ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸಂಚಾರ ಪೊಲೀಸರ ಬಳಿ ಬಾಡಿ ವೇರ್ ಕ್ಯಾಮರಾಗಳಿವೆ. ಈಗಿರುವ 280 ಇಂತಹ ಕ್ಯಾಮರಾಗಳನ್ನು 600ಕ್ಕೆ ಹೆಚ್ಚಿಸುವ ಚಿಂತನೆ ಇದೆ ಎಂದು ಹೇಳಿದರು.