ಬೆಂಗಳೂರು/ತುಮಕೂರು:ತುಮಕೂರು ಜಿಲ್ಲೆಯಪಾವಗಡದ ಪಳವಳ್ಳಿ ಬಳಿ ನಡೆದ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಫಲಿಸದೇ 19 ವರ್ಷದ ಯುವಕ ಮಹೇಂದ್ರ ಶನಿವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಬೆನ್ನು ಮೂಳೆಗೆ ಏಟು ಬಿದ್ದಿ ಪರಿಣಾಮ ಬುಡ್ಡಾರೆಡ್ಡಿ ಗ್ರಾಮದ ಮಹೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ನಗರದ ಅಸ್ಪತ್ರೆಗೆ ಕರೆತರಲಾಗಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಂತರ ಮಹೇಂದ್ರ ಅವರನ್ನು ಕೆಆರ್ ಮಾರ್ಕೆಟ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಅಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಸಾವನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಮಕೂರಿನ ಪಾವಗಡ ಸಮೀಪ ಮಾರ್ಚ್ 21 ರಂದು ಖಾಸಗಿ ಬಸ್ ಅಪಘಾತ ಸಂಭವಿಸಿತ್ತು. ದುರಂತದಿಂದ ಈವರೆಗೆ ಒಟ್ಟು 7 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಗಾಯಾಳುಗಳನ್ನು ತುಮಕೂರು ಮತ್ತು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಸ್ಥರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಜೊತೆಗೆ ಸಚಿವ ಶ್ರೀರಾಮುಲು ಅವರು ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ.
(ಇದನ್ನೂ ಓದಿ: ಬಸ್ನ ಕಿಟಕಿ ಗಾಜುಗಳನ್ನು ಒಡೆದು ಹೊರಬಂದೆವು.. ಪ್ರಾಣ ಉಳಿಸಿಕೊಂಡ ಬಗ್ಗೆ ಗಾಯಾಳು ಪ್ರತಿಕ್ರಿಯೆ)
ಮಗನ ಚಿಕಿತ್ಸೆಗೆ ಪರದಾಡಿದ್ದ ಪೋಷಕರು:ಮಹೇಂದ್ರ ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಪರದಾಡಿದ್ದರು. ಶಾಸಕರು ಸೇರಿದಂತೆ ಸಂಘಸಂಸ್ಥೆಗಳ ಮುಖಂಡರು ಹಣ ಒದಗಿಸಿದ್ದರು. ಜೊತೆಗೆ ಯುವಕನ ಸಂಪೂರ್ಣ ಚಿಕಿತ್ಸೆಯ ವೆಚ್ಚ ಸರ್ಕಾರವೇ ಭರಿಸಬೇಕೆಂದು ಶಾಸಕ ವೆಂಕಟರಮಣಪ್ಪ ಸದನದ ಬಾವಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದರು. ಆದ್ರೆ ವಿಧಿ ಆಟವೇ ಬೇರೆಯಾಗಿ ಯುವಕ ಮಹೇಂದ್ರ ಸಾವನ್ನಪ್ಪಿದ್ದಾನೆ. ಇರುವ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.