ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದಿನಿಂದ ಪ್ಯಾಸೆಂಜರ್ ರೈಲು ಸಂಚಾರ ಮತ್ತೆ ಆರಂಭವಾಗುತ್ತಿದೆ. ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಲಹಂಕ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‌ಗೆ (ಕೆಐಎಡಿ) ಐದು ಮೆಮು ರೈಲುಗಳ ಸೇವೆ ಕಾರ್ಯಾರಂಭವಾಗಿದೆ.
ನಸುಕಿನ ಜಾವ 4.55 ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ (ಕೆಎಸ್‌ಆರ್) ಹೊರಟ ಮೊದಲ ರೈಲು, ಬೆಳಗ್ಗೆ 6.10ಕ್ಕೆ ಕೆಐಎಡಿ ತಲುಪಲಿದೆ. ಬೆಳಗ್ಗೆ 6.38ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಟೇಷನ್ನಿಂದ ಹೊರಡುವ ರೈಲು ಬೆಳಗ್ಗೆ 7 ಗಂಟೆಗೆ ಯಲಹಂಕ ನಿಲ್ದಾಣ ತಲುಪಲಿದೆ. ಮತ್ತೊಂದು ರೈಲು ಬೆಳಗ್ಗೆ 7.45ಕ್ಕೆ ಯಲಹಂಕದಿಂದ ಹೊರಟು 8.03ಗೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್ ತಲುಪಲಿದೆ.
ಹಾಗೆಯೇ, ಮತ್ತೊಂದು ರೈಲು ಬೆಳಗ್ಗೆ 8.57 ಕ್ಕೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್ನಿಂದ ಹೊರಟು ಬೆಳಗ್ಗೆ 10.10ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇನ್ನೊಂದು ರೈಲು ಮಧ್ಯಾಹ್ನ 12.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ನಿಂದ ತೆರಳಿ ಮಧ್ಯಾಹ್ನ 1.20 ಕ್ಕೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್‌ಗೆ ತಲುಪಲಿದೆ.