ಕರ್ನಾಟಕ

karnataka

ETV Bharat / city

ಹೆಚ್​ಡಿಕೆ ವಿರುದ್ಧ ಹೇಳಿಕೆ ನೀಡಿರುವ ಸುಮಲತಾ, ರಾಕ್​ಲೈನ್ ಕ್ಷಮೆಯಾಚಿಸಬೇಕು: ಟಿ.ಎ.ಶರವಣ

ಭಾಷೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಕುಮಾರಸ್ವಾಮಿ ಅವರಿಗೆ ಇದೆ. ಅವರ ವಿರುದ್ಧ ಹೇಳಿಕೆ ನೀಡಿರುವ ಸುಮಲತಾ ಹಾಗೂ ರಾಕ್​ಲೈನ್ ವೆಂಕಟೇಶ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಟಿ.ಎ.ಶರವಣ ಎಚ್ಚರಿಕೆ ನೀಡಿದರು.

TA Sarawana
ಟಿ.ಎ.ಶರವಣ

By

Published : Jul 10, 2021, 1:15 PM IST

Updated : Jul 10, 2021, 1:46 PM IST

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವುದಕ್ಕೆ ರಾಕ್​ಲೈನ್ ವೆಂಕಟೇಶ್ ಅವರಿಗೆ ಯಾವ ನೈತಿಕತೆ ಇದೆ. ನೀವೇನು ಎಂಪಿನಾ, ಶಾಸಕರಾ, ಜಿಲ್ಲಾ ಪಂಚಾಯಿತಿ ಸದಸ್ಯರಾ? ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಗುಡುಗಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಏನ್ರೀ ನೀವು ಯಾವ ಸ್ಥಾನದಲ್ಲಿದ್ದೀರಾ?. ರೋಡಲ್ಲಿ ಹೋಗೋ ದಾಸಯ್ಯ ಮಾಡ್ತಾನೆ ಅಂತೀರಾ. ಮುಖ್ಯಮಂತ್ರಿ ಅಂದ್ರೆ ಯಾರು, ರಾಜ್ಯದ ದೊರೆ. ರಾಜಕೀಯ ಮಾಡುವವರು ಚುನಾವಣೆಗೆ ಬನ್ನಿ ಎಂದು ರಾಕ್​ಲೈನ್​ಗೆ ಶರವಣ ಸವಾಲು ಹಾಕಿದರು.

ಕ್ಷಮೆಯಾಚಿಸಿ:ಭಾಷೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ಹೆಚ್​ಡಿಕೆ ಅವರಿಗೆ ಇದೆ. ಕುಮಾರಸ್ವಾಮಿ ಅವರ ವಿರುದ್ಧ ಹೇಳಿಕೆ ನೀಡಿರುವ ಸುಮಲತಾ ಹಾಗೂ ರಾಕ್​ಲೈನ್ ವೆಂಕಟೇಶ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ವೈಯುಕ್ತಿಕ ವಿಚಾರದ ಬಗ್ಗೆ ಮಾತನಾಡಲ್ಲ. ನೀವು ಎಲ್ಲಿ ಬಡ್ಡಿ ಕೊಡ್ತೀರಾ, ತೆಗೆದುಕೊಳ್ತೀರ ಹೇಳಲ್ಲ. ರಾಜಕೀಯಕ್ಕೆ ಬನ್ನಿ ವೇದಿಕೆ ಸಿದ್ಧತೆ ಮಾಡೋಣ. ನೀವು ಯಾವ ಎಪಿಸೋಡ್​ ಬೇಕಾದ್ರೂ ಮಾಡಿ. ದಾಖಲೆ ಇಲ್ಲದೆ ಕುಮಾರಣ್ಣ ಮಾತನಾಡಲ್ಲ. ಯಾವ ಟೈಮಲ್ಲಿ ಬಿಡಬೇಕೋ ಆಗ ಆಡಿಯೋ, ಸಿಡಿ ಬಿಡ್ತಾರೆ. ಈ ವಿಚಾರದಲ್ಲಿ ಸುಳ್ಳು ಹೇಳೋಕೆ ಆಗುತ್ತಾ ಎಂದರು.

ರಾಜ್ಯದ ಜನರು ಪ್ರೀತಿಯಿಂದ ಅಣ್ಣಾ ಎಂದು ಕರೆಯೋದು ಇಬ್ಬರನ್ನ ಮಾತ್ರ. ಒಬ್ಬರು ಡಾ.ರಾಜಣ್ಣ, ಮತ್ತೊಬ್ಬರು ಕುಮಾರಣ್ಣ. ಕುಮಾರಣ್ಣ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಜನರ ಸೇವೆ, ಅಭಿವೃದ್ಧಿಗಾಗಿ ದುಡಿದವರು. ಆರು ಕೋಟಿ ಕನ್ನಡಿಗರ ಆಸ್ತಿ ಅವರು. ಅಣ್ಣ ಅನ್ನೋದು ಜನರು ಕೊಟ್ಟ ಬಿರುದು ಎಂದರು.

ಇದೇ ವೇಳೆ ಹಿರಿಯ ನಟ ದೊಡ್ಡಣ್ಣ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಶರವಣ, ಮನವಿ ಕೊಡೋಕೆ ಎರಡು ಗಂಟೆ ಕುಮಾರಸ್ವಾಮಿ ಮುಂದೆ ಕಾಯ್ದಿದ್ದೆವು ಎಂದಿದ್ದೀರಾ. ನೀವು ದೊಡ್ಡ ಕಲಾವಿದರು, ಚಿತ್ರದುರ್ಗದಲ್ಲಿ ಅಳಿಯನಿಗೆ ಜೆಡಿಎಸ್​ನಿಂದ ಟಿಕೆಟ್ ಕೊಡಿಸಿದ್ರಿ, ಆಗ ವೇದಿಕೆಯಲ್ಲಿ ಏನೇನು ಮಾತನಾಡಿದ್ರಿ. ಮಾತನಾಡುವಾಗ ಸರಿಯಾಗಿ ಮಾತನಾಡಿ ಎಂದು ಕಿಡಿಕಾರಿದರು.

ಅಂಬರೀಶ್ ಜೊತೆ ಕುಳಿತು ಊಟ ಮಾಡಿದ್ದೇವೆ. ನಾವು ಅಂಬರೀಶ್ ಅಭಿಮಾನಿಗಳು. ದಿನಕ್ಕೊಂದು ಎಪಿಸೋಡ್ ಯಾಕೆ ಬಿಡ್ತಿದ್ದೀರಾ. ನಾನು ಇನ್ನು ಮಾತನಾಡಲ್ಲ ಅಂತ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮತ್ತೆ ಯಾಕೆ ನೀವು ಎಪಿಸೋಡ್ ಬಿಡ್ತಿರೋದು ಎಂದು ಪ್ರಶ್ನಿಸಿದ ಶರವಣ, ಮಾಜಿ ಸಿಎಂ ಬಗ್ಗೆ ಮಾತನಾಡಲು ಹಿಡಿತ ಇರಬೇಕು. ಗಾಳಿಯಲ್ಲಿ ಗುಂಡು ಹಾರಿಸುವುದಲ್ಲ ಎಂದು ವಾಗ್ದಾಳಿ ನಡೆಸಿದರು.

ಸಂಸದೆ ಸುಮಲತಾ ಒಬ್ಬ ಸಂಸದರಷ್ಟೇ. ಕುಮಾರಸ್ವಾಮಿ ಸಿಎಂ ಆಗಿದ್ದವರು. ನೀವು ಎಂಪಿಯಾಗಿ ಎರಡು ವರ್ಷವಾಯ್ತು. ರೈತರಿಗಾಗಿ ಎಷ್ಟು ಅನುದಾನ ತಂದಿದ್ದೀರಾ?. ಕೋವಿಡ್ ಸಂಕಷ್ಟಸಲ್ಲಿ ಎಷ್ಟು ಜನರಿಗೆ ಸಹಾಯ ಮಾಡಿದ್ದೀರಾ, ಜಿಲ್ಲೆಯಲ್ಲಿ ಎಷ್ಟು ಹೋರಾಟ ಮಾಡಿದ್ದೀರಾ? ಇದರ ಬಗ್ಗೆ ಜನ ಕೇಳ್ತಿದ್ದಾರೆ. ಅವರಿಗೆ ಹೇಳಿ ಎಂದು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಐವತ್ತು ವರ್ಷದಿಂದ ಗಣಿಗಾರಿಕೆ ನಡೆಯುತ್ತಿದೆ. ಅಲ್ಲೇನು ಬಂಗಾರದ ಗಣಿ ಇದ್ಯಾ. ಅಲ್ಲಿರೋದು ಕಲ್ಲು ಬಂಡೆ. ಜನಸಮಾನ್ಯರಿಗೆ ಅನುಕೂಲವಾಗ್ತಿದೆ. ಅಕ್ರಮ‌ ಗಣಿಗಾರಿಕೆ ಇಲ್ಲ ಅಂತ ಹೇಳ್ತಿದ್ದಾರೆ. ನೀವು ಕೆಆರ್​ಎಸ್ ವಿಚಾರ ಇಟ್ಕೊಂಡು ಆರೋಪ ಮಾಡ್ತಿದ್ದೀರಾ?.
ಸುಮಲತಾ ಅವರೇ ಮಾಧ್ಯಮಗಳನ್ನು ಕೆಆರ್​ಎಸ್ಗೆ​ ಕರೆದೊಯ್ದು ಬಿರುಕು ಬಿಟ್ಟಿದ್ದನ್ನು ತೋರಿಸಿ, ಯಾಕೆ ಬಿರುಕು ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಅಂಬರೀಶ್ ಅಂತ್ಯಕ್ರಿಯೆ ವೇಳೆ ಕುಮಾರಸ್ವಾಮಿ ಏನೂ ಮಾಡಲಿಲ್ಲ ಅಂತಾರೆ. ಆದರೆ, ಅಂತ್ಯಕ್ರಿಯೆ ತುಂಬಾ ಚೆನ್ನಾಗಿ ಆಗಿದೆ. ಎಲ್ಲಾ ಸಹಕಾರ ಕೊಟ್ಟಿದ್ದೀರ ಅಂತ ಸುಮಲತಾ ಅವರೇ ಧನ್ಯವಾದ ಹೇಳಿದ್ದರು ಎಂದು ಅಂದು ಸುಮಲತಾ ಅವರು ಮಾತನಾಡಿರುವ ವಿಡಿಯೋ ಮಾಧ್ಯಮಗಳಿಗೆ ತೋರಿಸಿದರು.

ಇಲ್ಲಿಗೆ ಮುಕ್ತಾಯ ಮಾಡಿ:ಕಾವೇರಿ ಮಂಡ್ಯಗೆ ಮಾತ್ರ ಇರೋದಲ್ಲ. 10 ಜಿಲ್ಲೆಗೆ ಸೇರಿ ಸೇರಿದ್ದು, ಇದನ್ನು ಅರ್ಥ ಮಾಡಿಕೊಳ್ಳಿ ಎಂದ ಶರವಣ, ಇದು ಇಲ್ಲಿಗೇ ಮುಕ್ತಾಯ ಮಾಡಿ ಎಂದು ಮನವಿ ಮಾಡಿದರು. ಜೊತೆಗೆ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾತನಾಡಿದ್ದಿರಾ? ಅವರು ಕೋವಿಡ್ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಮಂಡ್ಯದಲ್ಲಿ ನೀವು ಏನು ಮಾಡಿದ್ದೀರಾ? ಎಂದು ಪ್ರಶ್ನಿಸಿದರು.

Last Updated : Jul 10, 2021, 1:46 PM IST

ABOUT THE AUTHOR

...view details