ಬೆಂಗಳೂರು :ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರ ಕಾರಾಗೃಹದಲ್ಲಿ ಕೈದಿಗಳಷ್ಟೇ ಅಲ್ಲ, ಅಧಿಕಾರಿಗಳೂ ಭ್ರಷ್ಟಾಚಾರದಲ್ಲಿ ತೊಡಗಿರುವ ಮಾಹಿತಿ ಇದೆ. ವರದಿಗಾಗಿ ಕಾಯುತ್ತಿದ್ದೇವೆ. ಜೈಲಿನೊಳಗಿನ ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಅಂತಹ ಕೈದಿಗಳ ಹೆಸರನ್ನು ಗೌಪ್ಯವಾಗಿರಿಸಿ ಅವರ ಶಿಕ್ಷೆ ತಪ್ಪಿಸುವ ಭರವಸೆಯನ್ನು ಗೃಹಸಚಿವರು ಈ ವೇಳೆ ನೀಡಿದರು.
ಪರಪ್ಪನ ಅಗ್ರಹಾರ ಜೈಲಿನೊಳಗೆ ತಪಾಸಣೆ ಮಾಡಲಾಗಿದೆ. ಮುರುಗನ್ ಸಮಿತಿಯ ವರದಿ ಮೇಲೆ ಸಾಕಷ್ಟು ಜನರನ್ನು ವರ್ಗಾಯಿಸಲಾಗಿದೆ. ಡಿಐಜಿ ಸಹಿತ 25 ಜನರನ್ನು ವರ್ಗಾವಣೆ ಮಾಡಿದ್ದೇವೆ. ಮುರುಗನ್ ವರದಿಯಲ್ಲಿ ಹೆಸರಿದ್ದವರನ್ನು ಅಮಾನತು ಮಾಡಿದ್ದೇವೆ. 15 ಮಂದಿ ಜೈಲಿನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. 3800 ವಿಚಾರಾದೀನ ಕೈದಿ, 1100 ಸಜಾ ಕೈದಿಗಳು ಜೈಲಲ್ಲಿದ್ದಾರೆ. ಯಾವುದೇ ಕೈದಿಗಳ ಬಳಿ ಮಾದಕ ವಸ್ತು ಫೋನ್ ಸಿಕ್ಕಿದರೆ ನೇರವಾಗಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹಸಚಿವರು ಎಚ್ಚರಿಕೆ ನೀಡಿದರು.