ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 217ನೇ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮಕ್ಕೆ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ(Padma sri awardee Harekala Hajabba) ಅವರು ಅತಿಥಿಯಾಗಿ ಆಗಮಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಹಾಜಬ್ಬ ಅವರ ಜೊತೆ ಮಾತುಕತೆ ನಡೆಸಿದರು. ನೆರೆಯಿಂದ ಕಳೆದುಕೊಂಡ ಮನೆ, ಸರ್ಕಾರ ಕೊಟ್ಟ ಜಾಗದಲ್ಲಿ ವಾಸ ಮಾಡಿ ಶಾಲೆಗೆ ಹೋಗಲಾಗದೇ ಕಿತ್ತಳೆ ಹಣ್ಣನ್ನು ಸಾಲ ಮಾಡಿ ತೆಗೆದುಕೊಂಡು ಮಾರಾಟ ಮಾಡಲು ಆರಂಭಿಸಿದ ಬಾಲ್ಯ ಜೀವನವನ್ನು ನೆನೆಯುತ್ತಾ ಅಕ್ಷರ ಸಂತ ತಮ್ಮ ಮಾತನ್ನು ಶುರು ಮಾಡಿದರು.
'ಮನೆಯಂಗಳದಲ್ಲಿ ಮಾತುಕತೆ'ಯಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ.. ಮಾತುಕತೆ ಮುಂದುವರಿಸಿದ ಹಾಜಬ್ಬ, ನನ್ನ ಹೆಂಡತಿ 20 ವರ್ಷಗಳಿಂದ ಮಲಗಿದ್ದಲ್ಲೇ ಇದ್ದಾರೆ. ಪದ್ಮಶ್ರೀ ಸಿಕ್ಕ ಬಳಿಕ ಮನೆಗೆ ಬಂದ ದೊಡ್ಡವರು, ಉದ್ಯಮಿಗಳು ನನಗೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು. ನನ್ನ ರೀತಿ ಯಾರೂ ಬಡತನದಲ್ಲಿ ಇರಬಾರದು. ವಿದ್ಯಾಭ್ಯಾಸ ಪಡೆಯದೇ ಉಳಿಯಬಾರದು ಎಂದು ಮನವಿ ಮಾಡಿದರು.
ಶಾಲೆ ತೆರೆಯುವ ಕನಸು :1978-79ರಲ್ಲಿ ಸರ್ಕಾರಿ ಶಾಲೆಯನ್ನು ತೆರೆಯುವ ಕನಸು ಕಂಡೆ. ನಂತರ ಶಾಸಕರು, ದಾನಿಗಳ ಸಹಾಯದಿಂದ ಸಾಲ ಮಾಡಿ ಶಾಲೆ ಆರಂಭಿಸಲಾಯಿತು. ಮಾತಿನುದ್ದಕ್ಕೂ ಶಾಲೆಗೆ ಜಾಗ ಕೊಳ್ಳಲು, ಕಟ್ಟಡ ಕಟ್ಟಲು ಸಹಾಯ ಮಾಡಿದ ಬೇರೆ ಬೇರೆ ಊರಿನ ನೂರಾರು ಜನರನ್ನು ನೆನಪಿಸಿಕೊಂಡರು.
ದೇಶದ ಒಬ್ಬ ಸಾಮಾನ್ಯ ಮನುಷ್ಯನಿಗೆ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಕೊಡುವಾಗ ನನಗೆ ಕಣ್ಣುತುಂಬಿ ಹೋಯಿತು. ನನಗೆ ಪ್ರಶಸ್ತಿ ಬಂತು ಎಂದು ಹೇಳಲು ದೆಹಲಿಯಿಂದ ಕರೆ ಬಂದಾಗ ನಾನು ರೇಷನ್ ಕ್ಯೂನಲ್ಲಿ ನಿಂತಿದ್ದೆ. ಸಾಮಾನ್ಯನನ್ನು ಗುರುತಿಸಿದ್ದಕ್ಕೆ ಎಲ್ಲರಿಗೂ ನಾನು ಋಣಿ ಎಂದು ಹೇಳಿದರು.
ತನ್ನೂರಿನಲ್ಲಿ ಆರಂಭಿಸಿದ ಕನ್ನಡ ಶಾಲೆಯಲ್ಲಿ ಈಗ 300 ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲೇ ಪಿಯು ಕಾಲೇಜು ಮಾಡಬೇಕೆಂಬುದು ನನ್ನ ಕನಸು ಎಂದರು. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳದ ಹಾಜಬ್ಬ ಬಡತನದಿಂದಾಗಿ ಶಾಲೆಯ ಮುಖ ನೋಡಲಾಗದೇ, ಬೀಡಿ ಕಟ್ಟುತ್ತಾ ನಂತರ ಕಿತ್ತಳೆ ಹಣ್ಣಿನ ಮಾರಾಟದಲ್ಲಿ ತೊಡಗಿಸಿಕೊಂಡು ವ್ಯಾಪಾರಿಯಾಗುತ್ತಾರೆ.
ವ್ಯಾಪಾರ ಮಾಡುವಾಗ ತನಗೆ ಭಾಷೆಯ ತೊಡಕಾದಾಗ ಆ ಪರಿಸ್ಥಿತಿ ತನ್ನೂರಿನ ಮಕ್ಕಳಿಗೂ ಬರಬಾರದೆಂದು ತನ್ನೂರಿನಲ್ಲೇ ಒಂದು ಶಾಲೆ ತೆರೆಯಲು ಹೋರಾಟ ಆರಂಭಿಸಿದರು. ಶಾಸಕರು-ಶಿಕ್ಷಣಾಧಿಕಾರಿಗಳ ಮನೆ-ಕಚೇರಿಗೆ ಅಲೆದು ಹರೇಕಳದ ನ್ಯೂಪಡ್ಡುಗೆ ಸರ್ಕಾರಿ ಶಾಲೆ ಮಂಜೂರು ಮಾಡಿಸಿಕೊಂಡರು.
ಇದನ್ನೂ ಓದಿ:ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿ ದಿವ್ಯಾಂಗರು ಜೀವನ ಸುಧಾರಿಸಿಕೊಳ್ಳಬೇಕು : ರಾಜ್ಯಪಾಲರ ಕರೆ
ಕಿತ್ತು ತಿನ್ನುವ ಬಡತನದ ನಡುವೆಯೂ ಶಾಲೆಗಾಗಿ ಜಮೀನು, ಕಟ್ಟಡ ಒದಗಿಸಲು, ಪ್ರೌಢಶಾಲೆಯಾಗಿ ಪರಿವರ್ತಿಸಲು ಬೆವರು ಸುರಿಸಿದರು. ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಹಾಜಬ್ಬ ಅವರ ಕಾರ್ಯ ಪತ್ರಿಕೆಯ ಮೂಲಕ ಪರಿಚಯವಾದಾಗ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದವು. ಇದೀಗ ಪದ್ಮಶ್ರೀಯೂ ಅವರ ಮುಡಿಗೇರಿದೆ. ಅವರ ಪಿಯು ಕಾಲೇಜು ನಿರ್ಮಾಣ ಕನಸು ನನಸಾಗಲಿ.. ಸರ್ಕಾರ ಅವರಿಗೆ ಬೆಂಬಲ ನೀಡಲಿ ಎಂದು ಆಶಿಸೋಣ..