ರಾಜ್ಯದಲ್ಲಿ ಸಂಪೂರ್ಣ ಪ್ರಗತಿ ಕಾಣದ ಆಕ್ಸಿಜನ್ ಘಟಕಗಳ ಸ್ಥಾಪನೆ : ನಿಮ್ಮ ಜಿಲ್ಲೆಯಲ್ಲಿ ಎಷ್ಟಿವೆ ? - ಕರ್ನಾಟಕದ ಜಿಲ್ಲೆಗಳಲ್ಲಿರುವ ಆಕ್ಸಿಜನ್ ಪ್ಲಾಂಟ್ಗಳೂ
ಕೊರೊನಾದ ಮೂರನೇ ಅಲೆ ರಾಜ್ಯದ ಕದ ತಟ್ಟುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕೋವಿಡ್ ಪ್ರಕರಣ ಉಲ್ಬಣಿಸುವ ಸಂಕೇತ ಗೋಚರಿಸುತ್ತಿದ್ದು, ಉಸಿರಾಟದ ಸಮಸ್ಯೆಯಿಂದ ಸೋಂಕಿತರು ಆಸ್ಪತ್ರೆಯತ್ತ ದಾಖಲಾಗುವ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಲಿದೆ. ಎರಡನೇ ಅಲೆಯ ಆಘಾತದ ಬಳಿಕ ಇದೀಗ ರಾಜ್ಯದಲ್ಲಿನ ಆಕ್ಸಿಜನ್ ಪ್ಲಾಂಟ್ಗಳ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.
ಮೂರನೇ ಅಲೆ ಭೀತಿ: ರಾಜ್ಯದಲ್ಲಿ ಪ್ರಗತಿ ಕಾಣದ ಆಕ್ಸಿಜನ್ ಘಟಕಗಳ ಸ್ಥಾಪನೆ
By
Published : Jan 2, 2022, 1:17 AM IST
ಬೆಂಗಳೂರು:ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ಕೋವಿಡ್ ಅಬ್ಬರಕ್ಕೆ ಸಾಕ್ಷಿಯಾಗುವ ಆತಂಕ ಎದುರಾಗಿದೆ. ಕೋವಿಡ್ ಪ್ರಕರಣದಲ್ಲಿ ಗಣನೀಯ ಹೆಚ್ಚಳ ಆಗುತ್ತಿದ್ದಂತೆ ಸೋಂಕಿತರು ಆಸ್ಪತ್ರೆಯತ್ತ ಹರಿದು ಬರುವ ಪ್ರಮಾಣವೂ ಹೆಚ್ಚಾಗುತ್ತಿದೆ.
ಅದರಲ್ಲೂ ಉಸಿರಾಟದ ಸಮಸ್ಯೆಗಳಿಂದ ಅತಿ ಹೆಚ್ಚು ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಹೆಚ್ಚಲಿದೆ. ಎರಡನೇ ಅಲೆಯಲ್ಲಿ ಕಂಡ ದುರಂತ ಇನ್ನೂ ಎಲ್ಲರ ಕಣ್ಣಮುಂದೆ ಇದೆ. ಆಕ್ಸಿಜನ್ ಕೊರತೆ ಉಂಟಾಗಿ ಸಾವಿರಾರು ಮಂದಿ ಸಾವನ್ನಪ್ಪಿದ ಘಟನೆಯನ್ನೂ ಮರೆಯಲು ಅಸಾಧ್ಯ.
ಇದೀಗ ಮತ್ತೆ ಮೂರನೇ ಅಲೆ ರಾಜ್ಯದ ಕದ ತಟ್ಟುತ್ತಿದೆ. ಮತ್ತೆ ಆಕ್ಸಿಜನ್ ಬೇಡಿಕೆ ಉಲ್ಬಣಿಸುವ ಆತಂಕ ಎದುರಾಗಿದೆ. ಎರಡನೇ ಅಲೆಯಲ್ಲಿ ಆಕ್ಸಿಜನ್ ನ ತೀವ್ರ ಕೊರತೆ ಎದುರಾಗಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು. ಇದೀಗ ಮೂರನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಆಕ್ಸಿಜನ್ ಘಟಕ ಸ್ಥಾಪನೆಯ ಸ್ಥಿತಿಗತಿ ಹೇಗಿದೆ ನೋಡೋಣ.
ಒಟ್ಟು ಚಾಲನೆಯಲ್ಲಿರುವ ಘಟಕ ಎಷ್ಟು?:ಎರಡನೇ ಅಲೆ ನೀಡಿದ ಹೊಡೆತಕ್ಕೆ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಪ್ರಾರಂಭಿಸಿತ್ತು. 30 ಜಿಲ್ಲೆಗಳಿಗೆ ಒಟ್ಟು 262 ಆಕ್ಸಿಜನ್ ಘಟಕಗಳನ್ನು ಮಂಜೂರು ಮಾಡಲಾಗಿತ್ತು. ಈ ಪೈಕಿ 224 ಪ್ಲಾಂಟ್ಗಳಿಗೆ ಆಕ್ಸಿಜನ್ ಉಪಕರಣಗಳು ಪೂರೈಕೆಯಾಗಿತ್ತು. ಆದರೆ ಈವರೆಗೆ ಒಟ್ಟು 190 ಆಕ್ಸಿಜನ್ ಘಟಕಗಳು ಚಾಲನೆಯಲ್ಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಪೈಕಿ ರಾಜ್ಯ ಸರ್ಕಾರ 40 ಆಕ್ಸಿಜನ್ ಘಟಕಗಳಿಗೆ ಮಂಜೂರಾತಿ ನೀಡಿತ್ತು. ಆದರೆ ಈವರೆಗೆ ಚಾಲನೆಗೊಂಡ ಘಟಕಗಳ ಸಂಖ್ಯೆ 29 ಮಾತ್ರ. ಇನ್ನು ಸಿಎಸ್ಆರ್ ಮೂಲಕ 130 ಘಟಕಗಳು ಮಂಜೂರಾತಿಯಾಗಿದ್ದವು. ಈ ಪೈಕಿ ಇಲ್ಲಿವರೆಗೆ ಚಾಲನೆಗೊಂಡಿರುವುದು ಕೇವಲ 77 ಮಾತ್ರ. ಪಿಎಂ ಕೇರ್ಸ್ನಿಂದ ಒಟ್ಟು 50 ಘಟಕಗಳು ಮಂಜೂರಾಗಿದ್ದು, ಆ ಪೈಕಿ ಎಲ್ಲಾ ಘಟಕಗಳು ಚಾಲನೆಗೊಂಡಿವೆ.