ಆಕ್ಸಿಜನ್ ಸಮರ್ಪಕ ನಿರ್ವಹಣೆಗೆ ಸಮಿತಿ ರಚಿಸಿ ಪಾಲಿಕೆ ಬಿಬಿಎಂಪಿ ಮುಖ್ಯ ಆಯುಕ್ತ ಆದೇಶ - ಬೆಂಗಳೂರು ಆಕ್ಸಿಜನ್ ಕೊರತೆ
ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಪಾರದರ್ಶಕವಾಗಿ ಪ್ರತಿನಿತ್ಯ ಆಕ್ಸಿಜನ್ ಒದಗಿಸಲು ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಆಕ್ಸಿಜನ್ ಬೇಡಿಕೆ ಮತ್ತು ಪೂರೈಕೆ ಮೇಲ್ವಿಚಾರಣೆಗೆ ಸಿಮಿತಿ ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕೋವಿಡ್ ಸೋಂಕಿತರಿಗೆ ಪಾರದರ್ಶಕವಾಗಿ ಪ್ರತಿನಿತ್ಯ ಆಕ್ಸಿಜನ್ ಒದಗಿಸಲು ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಆಕ್ಸಿಜನ್ ಬೇಡಿಕೆ, ರಶೀದಿ, ಪೂರೈಕೆ (ಖರ್ಚು) ಮತ್ತು ಬಾಕಿ ಎಷ್ಟಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಪಡೆಯಲು ಮೇಲ್ಚಿಚಾರಣಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ಆಮ್ಲಜನಕ ಭರ್ತಿ ಮಾಡುವ ಸಂಸ್ಥೆಗಳಿಗೆ ನೋಡಲ್ ಅಧಿಕಾರಿಗಳು, ಕ್ಯಾಂಪ್ ಅಧಿಕಾರಿಯನ್ನು ನಿಯೋಜಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ ಸೂಚಿಸಿದೆ. ಅಲ್ಲದೆ, ಆಮ್ಲಜನಕ ಪೂರೈಕೆ ಸಂಸ್ಥೆ ಮಟ್ಟದಲ್ಲಿ ಆಕ್ಸಿಜನ್ ಸಂಗ್ರಹ, ಪೂರೈಕೆ ಇತ್ಯಾದಿಗಳಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸಿದೆ ಎಂದು ತಿಳಿಸಿದ್ದಾರೆ.
ಪಾಲಿಕೆಯ ಎಲ್ಲಾ ವಲಯ ಆಯುಕ್ತರು, ಜಂಟಿ ಆಯುಕ್ತರು ತಮ್ಮ ವಲಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಆಸ್ಪತ್ರೆಗಳಿಗೆ ಕಂದಾಯ, ಇಂಜಿನೀಯರಿಂಗ್ ವಿಭಾಗದಿಂದ ಒಬ್ಬ ನೋಡಲ್ ಅಧಿಕಾರಿಯನ್ನುನೇಮಿಸಬೇಕು ಎಂದು ನಿರ್ದೇಶಿಸಲಾಗಿದೆ. ಈ ನೋಡಲ್ ಅಧಿಕಾರಿ ಒಟ್ಟಾರೆ ಆಕ್ಸಿಜನ್ ದಾಸ್ತಾನು, ಇಂಡೆಂಟ್ ಪ್ರಮಾಣ, ಸ್ವೀಕರಿಸಿದ ಪ್ರಮಾಣ ಮತ್ತು ಮುಗಿದಿರುವ ದಾಸ್ತಾನು ಮಾಹಿತಿಯನ್ನು ನೀಡಬೇಕೆಂದು ತಾಕೀತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.