ಬೆಂಗಳೂರು:ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮನೆಯ ಮಾಲೀಕನಿಗೆ ಅರಿವಿಲ್ಲವಾದರೆ ಆತನ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದಿರುವ ಹೈಕೋರ್ಟ್, ಮನೆ ಮಾಲಿಕನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಸಂಬಂಧ ಚಂದ್ರಲೇಔಟ್ ಠಾಣೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ನಾಗರಭಾವಿ ನಿವಾಸಿ ಪ್ರಭುರಾಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ಮಾನವ ಕಳ್ಳಸಾಗಣೆ ತಡೆ ಕಾಯ್ದೆಯ ಸೆಕ್ಷನ್ 3(2)(ಬಿ) ಪ್ರಕಾರ ಯಾವುದೇ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದು ಅದರ ಮಾಲೀಕನಿಗೆ ಅರಿವು ಇದ್ದಾಗ ಮಾತ್ರ ಆತನ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರನ ಒಡೆತನದಲ್ಲಿರುವ ಜಾಗದಲ್ಲಿ (ಮನೆ) ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಆತನಿಗೆ ಅರಿವು ಇರಲಿಲ್ಲ. ಈ ಕುರಿತ ಹೇಳಿಕೆಯನ್ನು ಪೊಲೀಸರೇ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಹೀಗಿದ್ದರೂ ಪ್ರಕರಣ ಮುಂದುವರಿಯಲು ಬಿಟ್ಟರೆ ಅರ್ಜಿದಾರರಿಗೆ ಕಿರುಕುಳವಾಗಲು ಮತ್ತು ಕಾನೂನಿನ ಸ್ಪಷ್ಟ ದುರ್ಬಳಕೆಯಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರನ ವಿರುದ್ಧದ ಪ್ರಕರಣ ರದ್ದುಪಡಿಸಿದೆ.