ಕೋವಿಡ್ ಸೋಂಕಿತರ ಚಿಕಿತ್ಸಾ ವೆಚ್ಚ ಮರು ನಿಗದಿ ಮಾಡಿ ಸರ್ಕಾರ ಆದೇಶ
ಕೋವಿಡ್ ಪೀಡಿತರಿಗೆ ರಾಜ್ಯ ಸರ್ಕಾರದ ಶಾಕ್: ಚಿಕಿತ್ಸಾ ವೆಚ್ಚ ಹೆಚ್ಚಿಸಿ ಆದೇಶ
By
Published : May 6, 2021, 9:02 PM IST
|
Updated : May 6, 2021, 11:50 PM IST
20:57 May 06
ಚಿಕಿತ್ಸಾ ವೆಚ್ಚ ಹೆಚ್ಚಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಬೇಡಿಕೆಯಂತೆ, ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಆಗುವ ಕೊರೊನಾ ಸೋಂಕಿತರ ಪ್ರತಿದಿನದ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಮರು ನಿಗದಿ ಮಾಡಿದೆ. ಕೋವಿಡ್ ಪೀಡಿತರಿಗೆ ಈ ಹಿಂದೆ ದಿನಕ್ಕೆ ಗರಿಷ್ಠ 10 ಸಾವಿರ ರೂ. ಚಿಕಿತ್ಸಾ ದರ ನಿಗದಿಯಾಗಿತ್ತು. ಇದೀಗ ಗರಿಷ್ಠ ದರವನ್ನು 11,500 ರೂ.ಗಳಿಗೆ ಏರಿಸಲಾಗಿದೆ. ಹೊಸ ದರ ಪಟ್ಟಿಯಲ್ಲಿಯೂ ಖಾಸಗಿ ಆಸ್ಪತ್ರೆಯಲ್ಲಿನ ಜನರಲ್ ವಾರ್ಡ್‌ನ ಪ್ರತಿದಿನದ ವೆಚ್ಚ 5,200 ರೂ. ಆಗಿದ್ದು, ಇದರಲ್ಲಿ ಬದಲಾವಣೆ ಆಗಿಲ್ಲ.
ಬದಲಾವಣೆ ದರ
ಎಚ್‌ಡಿಯು ವಾರ್ಡ್‌ಗೆ 8 ಸಾವಿರ ರೂ.
ವೆಂಟಿಲೇಟರ್ ಇಲ್ಲದ ತೀವ್ರ ನಿಗಾ ವಿಭಾಗದ ವಾರ್ಡ್‌ಗೆ 9,750 ರೂ.
ವೆಂಟಿಲೇಟರ್ ಉಳ್ಳ ಐಸಿಯು ವಾರ್ಡ್‌ಗೆ 11,500 ರೂ.
ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವವರ ಚಿಕಿತ್ಸಾ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್‌ನಲ್ಲಿ ದಿನಕ್ಕೆ 10 ಸಾವಿರ ರೂ. ಇದ್ದು, ವೆಂಟಿಲೇಟರ್ ಹೊಂದಿರುವ ತೀವ್ರ ನಿಗಾ ವಿಭಾಗದ ವಾರ್ಡ್‌ಗೆ 25 ಸಾವಿರ ರೂ.ಗಳನ್ನು ಸರ್ಕಾರ ಈಗಾಗಲೇ ನಿಗದಿ ಮಾಡಿದೆ.
ಮೇ 1ರಂದು ಖಾಸಗಿ ಆಸ್ಪತ್ರೆಗಳು ಮುಖ್ಯಸ್ಥರು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ವೇಳೆಯಲ್ಲಿ ಚಿಕಿತ್ಸಾ ದರವನ್ನು ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನಿಂದ ಶಿಫಾರಸ್ಸು ಆಗುವ ರೋಗಿಗೆ ನೀಡುವ ಚಿಕಿತ್ಸಾ ದರವನ್ನು ಹೆಚ್ಚಿಸಿದೆ. ಈ ವೆಚ್ಚವನ್ನು ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಭರಿಸುತ್ತದೆ. ರೋಗಿಗಳು ವೆಚ್ಚವನ್ನು ಭರಿಸಬೇಕಿಲ್ಲ.
ಈ ವೆಚ್ಚದಲ್ಲಿ ಪಿಪಿಇ ಕಿಟ್‌ನ ದರ, ಆಹಾರದ ವೆಚ್ಚ ಕೂಡ ಒಳಗೊಂಡಿರುತ್ತದೆ. ಈ ಆದೇಶವನ್ನು ಉಲ್ಲಂಘಿಸಿದವರು ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಕ್ಷೆಗೆ ಆರ್ಹರಾಗಿರುತ್ತಾರೆ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ದಿನಕ್ಕೆ ವಿವಿಧ ವಾರ್ಡ್ಗಳಲ್ಲಿ ಚಿಕಿತ್ಸೆಗೆ ಬೇಕಾಗುವ ವೆಚ್ಚ
ವಾರ್ಡ್
ಹಿಂದಿನ ದರ
ಹೊಸ ದರ
ಜನರಲ್ ವಾರ್ಡ್
5,200
5,200
ಎಚ್‌ಡಿಯು
7,000
8,000
ಪ್ರತ್ಯೇಕ ಐಸಿಯು
8,500
9,750
ಐಸಿಯು+ ವೆಂಟಿಲೇಟರ್
10,000
11,500
ಇನ್ನು ಕೋವಿಡ್ ಲಸಿಕೆ ನೀಡುವ ಖಾಸಗಿ ಆರೋಗ್ಯ ಸಂಸ್ಥೆಗಳು ಸೇವಾ ಶುಲ್ಕವಾಗಿ ಪ್ರತಿ ಡೋಸ್‌ಗೆ 100 ರೂ. ಮಾತ್ರ ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ನಿಗದಿತ ಸೇವಾಶುಲ್ಕಕ್ಕಿಂತ ಹೆಚ್ಚು ವಿಧಿಸುವ ಸಂಸ್ಥೆಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರವೇ ಭರಿಸುತ್ತೆ:ಸರ್ಕಾರದ ಶಿಫಾರಸ್ಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.