ಬೆಂಗಳೂರು:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಂಜಾನ್ ಹಬ್ಬದ ಪ್ರಯುಕ್ತ ನಿನ್ನೆ(ಶುಕ್ರವಾರ) ಸೌಹಾರ್ದ ಇಫ್ತಿಯಾರ್ ಕೂಟ ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ಕೆಲ ವರ್ಷಗಳಿಂದ ಇಫ್ತಿಯಾರ್ ಕೂಟ ಆಯೋಜಿಸುತ್ತಿದ್ದೇನೆ. ಇಸ್ಲಾಂ, ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ ಧರ್ಮದ ಗುರುಗಳನ್ನು ಹಾಗೂ ಇತರ ಮಹನೀಯರನ್ನು ಆಮಂತ್ರಿಸಿ ಕೂಟ ಆಯೋಜಿಸುತ್ತಿದ್ದೇನೆ. ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷದಿಂದ ಆಯೋಜಿಸಿರಲಿಲ್ಲ. ಈಗ ಸಾಕಷ್ಟು ಕಡಿಮೆ ಇರುವ ಹಿನ್ನೆಲೆ ಆಯೋಜಿಸಿದ್ದೇನೆ. ಇದಕ್ಕೆ ಮಾಜಿ ಸಚಿವ ಜಮೀರ್ ಅಹ್ಮದ್ ಸಾಥ್ ನೀಡಿದ್ದಾರೆ ಎಂದರು.
ಯಾವ ಇಫ್ತಿಯಾರ್ ಕೂಟಕ್ಕೂ ತೆರಳದ ಮುಸ್ಲಿಂ ಧರ್ಮಗುರು ಅಮೀರ್ ಷರಿಯನ್ ಸಗೀರ್ ಅಹ್ಮದ್ ಸಾಬ್ ಅವರು ಆಗಮಿಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸರ್ವಧರ್ಮಿಯರು ಸೇರಿ ಒಂದೆಡೆ ಪ್ರೀತಿ ಹಂಚಿಕೊಳ್ಳುವ ಸುವರ್ಣಾವಕಾಶ. ಇಲ್ಲಿ ಮಾನವೀಯತೆ ಬಹಳ ಮುಖ್ಯ. ಬಾಂಧವ್ಯ ವೃದ್ಧಿಸಲು ಇಂತಹ ಕಾರ್ಯಕ್ರಮ ಬಹಳ ಸಹಕಾರಿ. ಎಲ್ಲರೂ ಸೇರಿ ಸಂತೋಷ ಹಂಚಿಕೊಂಡಿದ್ದೇವೆ. ನಾವು ಮುಂದೆ ಮನುಷ್ಯರಾಗಿ ಬಾಳೋಣ. ಮನುಷ್ಯ ಸಂಬಂಧಗಳಿಗೆ ಇತ್ತೀಚೆಗೆ ದ್ವೇಷದ ಬೆಂಕಿ ಹಚ್ಚುವ ಕಾರ್ಯ ಆಗುತ್ತಿದೆ. ಇದನ್ನು ಖಂಡಿಸಬೇಕು. ನಾವೆಲ್ಲಾ ಅಣ್ಣ-ತಮ್ಮಂದಿರಂತೆ ಬಾಳಬೇಕು ಎನ್ನುವುದು ನಮ್ಮ ಆಶಯ ಎಂದರು.