ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಎರಡು ವಾರ ವಿಸ್ತರಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಕೊರೊನಾ ಎರಡನೇ ಅಲೆ, ರಾಷ್ಟ್ರೀಯ ಶಿಕ್ಷಣ ನೀತಿ, ಕುಸಿದಿರುವ ಕಾನೂನು ಸುವ್ಯವಸ್ಥೆ ಮುಂತಾದ ಗಂಭೀರ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿರುವುದರಿಂದ ವಿಧಾನಸಭಾ ಅಧಿವೇಶನವನ್ನು 15 ದಿನಗಳಿಗೆ ವಿಸ್ತರಿಸಬೇಕು ಎಂದು ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸಿದ್ದರಾಮಯ್ಯ, 2021ರ ಮಾರ್ಚ್ ನಂತರ 6 ತಿಂಗಳುಗಳು ಕಳೆದು ಅಧಿವೇಶನ ನಡೆಯುತ್ತಿದೆ. ರಾಜ್ಯವು ಭೀಕರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಕೊರೊನಾ ಮೂರನೇ ಅಲೆಯ ಭೀತಿ ಇದೆ. ಅದರ ತಯಾರಿ ನಡೆಸುವುದರ ಕುರಿತು ಚರ್ಚಿಸಬೇಕು. ಜೊತೆಗೆ ಪ್ರವಾಹ ಪೀಡಿತರಿಗೆ ಪರಿಹಾರ ನೀಡಿಲ್ಲ. ಅರೆಬರೆಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲು ಹೊರಟಿದೆ.
ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಇತ್ಯಾದಿಗಳೆಲ್ಲಾ ಅತ್ಯಂತ ಮುಖ್ಯವಾದ ಸಂಗತಿಗಳಾಗಿದ್ದು, ಸಮರ್ಪಕವಾಗಿ ಚರ್ಚೆ ನಡೆಸಿ, ಪರಿಹಾರ ಸೂತ್ರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಆದರೆ 6 ತಿಂಗಳುಗಳ ನಂತರ ಕೇವಲ 10 ದಿನಗಳು ಅಧಿವೇಶನವು ನಡೆಯುತ್ತಿದೆ. ಲೆಕ್ಕಕ್ಕೆ 10 ದಿನಗಳ ಅಧಿವೇಶನ ನಡೆಯುತ್ತಿದ್ದರೂ ಮೊದಲ ದಿನ, ಮೊದಲ ವಾರದ ಶುಕ್ರವಾರ, ಎರಡನೇ ವಾರದ ಶುಕ್ರವಾರ ಹೀಗೆ 10 ದಿನಗಳಲ್ಲಿ 3 ದಿನಗಳ ಅವಧಿಯಲ್ಲಿ ಚರ್ಚೆ, ಪ್ರಶ್ನೋತ್ತರಗಳು ನಡೆಯುತ್ತಿಲ್ಲ.
ಉಳಿದದ್ದು ಕೇವಲ 7 ದಿನಗಳು ಮಾತ್ರ ಈ ಅವಧಿಯಲ್ಲಿ ನಾವು ಸೆ.16ರಂದು ಪ್ರಸ್ತಾಪಿಸಿದ ಬೆಲೆ ಏರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅಂದು ಮುಖ್ಯಮಂತ್ರಿಗಳು ಉತ್ತರ ನೀಡುತ್ತಿದ್ದಾರೆ. ವಾರದಲ್ಲಿ ಇನ್ನುಳಿದಿರುವುದು. 3 ದಿನಗಳ ಕಾಲಾವಕಾಶ ಮಾತ್ರ, ಈ 3 ದಿನಗಳ ಅವಧಿಯಲ್ಲಿ ಯಾವ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.