ಬೆಂಗಳೂರು: ಪ್ರಧಾನಿಯವರು ಏಕಮುಖವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಯಾರ ಜೊತೆಗೂ ಅವರು ಚರ್ಚೆ ಮಾಡುವುದಿಲ್ಲ. ಹೀಗಾಗಿ ಕೊರೊನಾ ಸೋಂಕು ವ್ಯಾಪಕವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಪಾತಾಳ ತಲುಪಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ರೈತರು ಕಾಯಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಮುಂಜಾಗ್ರತಾ ಕ್ರಮಗಳ ಕೊರತೆ ಇದಕ್ಕೆಲ್ಲ ಕಾರಣ. ವಿಮಾನಗಳ ಹಾರಾಟ ಮೊದಲೇ ರದ್ದು ಮಾಡಿದ್ದರೆ ಸೋಂಕು ಭಾರಿ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಈಗ ತಪ್ಪು ಮುಚ್ವಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನನಡೆದಿದೆ ಎಂದಿದ್ದಾರೆ.
ನಾಳೆ ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ:
ಎಪಿಎಂಸಿ ಕಾಯಿದೆಗೆ ತಿದ್ದುಪಡಿ, ಪಂಚಾಯಿತಿಗಳಿಗೆ ನಾಮ ನಿರ್ದೇಶನ, ಕಾರ್ಮಿಕ ಕಾಯಿದೆಗೆ ತಿದ್ದುಪಡಿ ಸೇರಿದಂತೆ ಸರ್ಕಾರದ ವಿವಿಧ ಕ್ರಮಗಳನ್ನು ಖಂಡಿಸಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಹೋರಾಟ ನಾಳೆಯಿಂದಲೇ ಆರಂಭ. ನಾಳೆ ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಶಾಸಕರಿಗೆ ಅಭಿನಂದನೆಗಳು ನರೇಗಾಗೆ ಹೆಚ್ಚಿನ ಹಣ ನೀಡುವುದಾಗಿ ಹೇಳಿರುವುದನ್ನು ಹೊರತು ಪಡಿಸಿದರೆ ಕೇಂದ್ರ ಸರ್ಕಾರದ ಪ್ಯಾಕೇಜ್ ನಿಂದ ಏನೂ ಅನುಕೂಲವಿಲ್ಲ. ಆರ್ಥಿಕ ತಜ್ಞರೇ ಈ ಮಾತು ಹೇಳುತ್ತಿದ್ದಾರೆ. ನಾವು ನೀಡಿದ ಸಲಹೆ, ಸೂಚನೆಗಳಿಗೆ, ಮಂಡಿಸಿದ ಬೇಡಿಕೆಗಳಿಗೆ ರಾಜ್ಯ ಸರ್ಕಾರವೂ ಸ್ಪಂದಿಸಿಲ್ಲ. ಹಣ್ಣು, ತರಕಾರಿ, ದಿನಸಿ ಕಿಟ್ ಗಳನ್ನು ವಿತರಿಸುವ ಮೂಲಕ ಕಷ್ಟ ಕಾಲದಲ್ಲಿ ಜನರಿಗೆ ಸಹಾಯ ಮಾಡಿದ ಪಕ್ಷದ ಎಲ್ಲ ಶಾಸಕರಿಗೆ ಅಭಿನಂದನೆಗಳು ಎಂದಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದರೂ ಈ ವರೆಗೆ ಯಾರಿಗೂ ಹಣ ಬಂದಿಲ್ಲ. ಪ್ಯಾಕೇಜ್ ಹೆಸರಲ್ಲಿ ಪ್ರಧಾನಿ ಹಾಗೂ ಸಿಎಂ ಬುರುಡೆ ಬಿಡುತ್ತಿದ್ದಾರೆ. ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಶಾಸಕರು ಜನತೆಯ ಮುಂದೆ ಇಡಬೇಕು ಎಂದರು.