ಬೆಂಗಳೂರು :ಯೋಗ ಮನುಷ್ಯನ ಶರೀರ ಮಾತ್ರವಲ್ಲದೆ, ಮಾನಸಿಕ ನೆಮ್ಮದಿಗೂ ಉಪಯುಕ್ತವಾಗಿದೆ. ಯೋಗದ ಒಂದು ಭಾಗ ಸೂರ್ಯ ನಮಸ್ಕಾರ, ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಹೀಗಾಗಿ, ಈ ಮಹತ್ವವನ್ನು ಮಕ್ಕಳಿಗೆ ತಿಳಿಸಲು, ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಮಾಡಬೇಕೆಂದು ಕೇಂದ್ರ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದೆ.
ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ 1 ರಿಂದ ಫೆಬ್ರವರಿ 7ರವರೆಗೆ ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಹಾಗೂ ಜ.26ರ ಗಣರಾಜ್ಯೋತ್ಸದಂದು ಸೂರ್ಯ ನಮಸ್ಕಾರ ಆಯೋಜಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿದೆ.0
ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದ ಕ್ರೋಢೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ತಿಳಿಸಿದ್ದಾರೆ.
ಸೂರ್ಯ ನಮಸ್ಕಾರ ಯೋಗಾಸನದ 10 ಭಂಗಿಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ವೃದ್ಧಿಗೆ ಹಾಗೂ ಮನೋಬಲ ಹೆಚ್ಚಿಸುವುದಕ್ಕೆ ನೆರವಾಗಲಿದೆ. 21 ದಿನಗಳಲ್ಲಿ ಸೂರ್ಯ ನಮಸ್ಕಾರಗಳನ್ನು ಮಾಡಿದವರಿಗೆ ಇ- ಪ್ರಮಾಣಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಟೋರ್ಟ್ಸ್ ಫೆಡರೇಷನ್ ತಿಳಿಸಿದೆ.