ದೇವನಹಳ್ಳಿ: ಕನಕಪುರದ ಕಪಾಲ ಬೆಟ್ಟದಂತೆ ದೇವನಹಳ್ಳಿಯ ಮಹಿಮಾ ಬೆಟ್ಟದಲ್ಲಿನ ಏಸು ಪ್ರತಿಮೆ ದೊಡ್ಡ ವಿವಾದಕ್ಕೆ ಮುನ್ನುಡಿ ಬರೆಯುವ ಹಂತದಲ್ಲಿತ್ತು. ಆದ್ರೆ ತಕ್ಷಣವೇ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ, ಏಸು ಪ್ರತಿಮೆ ತೆರವು ಮಾಡಿದ್ದರಿಂದ ಸ್ಥಳೀಯರು ಕಣ್ಣೀರು ಹಾಕಿದರು.
ಮಹಿಮಾ ಬೆಟ್ಟದಿಂದ ಏಸು ಪ್ರತಿಮೆ ತೆರವು ಕಾರ್ಯಾಚರಣೆ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿಯ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡಿ, ಬೆಟ್ಟದ ಸುತ್ತಲು ಶಿಲುಬೆಗಳನ್ನ ನೆಟ್ಟು, ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ಪ್ರತಿ ಭಾನುವಾರ ಕ್ರೈಸ್ತ ಧರ್ಮೀಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಏಪ್ರಿಲ್ 7 ರ ಗುಡ್ ಫ್ರೈಡೇ ದಿನದಂದು ಸಂತ ಜೋಸೆಫ್ ಅವರ ಜೀವಂತ ಶಿಲೆ ಹಾದಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಕರ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪರಿಣಾಮ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ವಾಸ್ತವವಾಗಿ ಮಹಿಮಾ ಬೆಟ್ಟ ಸರ್ಕಾರಿ ಜಮೀನಾಗಿದ್ದು, ಬೆಟ್ಟವನ್ನ ಅಕ್ರಮವಾಗಿ ವಶಕ್ಕೆ ತೆಗೆದುಕೊಂಡು ಕ್ರೈಸ್ತರು ಬೆಟ್ಟದ ಮೇಲೆ ಏಸು ಪ್ರತಿಮೆ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಹಿಂದೂ ಜಾಗರಣ ವೇದಿಕೆ ಸದಸ್ಯರು, ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ದೇವನಹಳ್ಳಿ ತಹಶೀಲ್ದಾರ್ ಅಜಿತ್ ಕುಮಾರ್ ರೈ, ಗ್ರಾಮಕ್ಕೆ ಭೇಟಿ ನೀಡಿ ಸರ್ವ ಧರ್ಮೀಯರ ಸಭೆ ನಡೆಸಿ, ಪ್ರತಿಮೆ ತೆರವುಗೊಳಿಸುವಂತೆ ಹೇಳಿದ್ದರು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಕ್ರೈಸ್ತ ಧರ್ಮೀಯರು ಪ್ರತಿಮೆ ತೆರವಿಗೆ ಒಪ್ಪಿಗೆ ನೀಡಿದ ಹಿನ್ನೆಲೆ ದೇವನಹಳ್ಳಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಏಸು ಪ್ರತಿಮೆ ತೆರವು ಕಾರ್ಯ ನಡೆಸಿದರು. ದೊಡ್ಡಬಳ್ಳಾಪುರ ಡಿವೈಎಸ್‍ಪಿ ರಂಗಪ್ಪ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸರು, ಕ್ರೇನ್ ಹಾಗೂ ಟಿಪ್ಪರ್ಗಳ ಮೂಲಕ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಎಂಟ್ರಿ ಕೊಟ್ಟು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು ಮಾಡಿದರು.
ತೆರವು ಮಾಡಿದ ಏಸು ಪ್ರತಿಮೆಯನ್ನ ಟಿಪ್ಪರ್ ಮೂಲಕ ಗ್ರಾಮದಲ್ಲಿನ ಚರ್ಚ್‍ಗೆ ಸ್ಥಳಾಂತರಿಸಲಾಯಿತು. ಆದರೆ ಈ ವೇಳೆ ಬೆಳಗ್ಗೆಯಿಂದಲೂ ಊಟ ತಿಂಡಿ ಬಿಟ್ಟು ಚರ್ಚ್ ಬಳಿ ಮೊಕ್ಕಾಂ ಹೂಡಿದ್ದ ಗ್ರಾಮದ ಕೈಸ್ತ ಧರ್ಮೀಯರು, ಪ್ರತಿಮೆ ಆಗಮಿಸುತ್ತಿದ್ದಂತೆ ಕೈಯಲ್ಲಿ ಮೆಣದಬತ್ತಿ ಹಿಡಿದು ಕಣ್ಣೀರು ಹಾಕಿದರು. ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸುತ್ತಿದ್ದ ದೇವದೂತ ಇಂದು ತೆರವಾಗಿದ್ದು, ಕ್ರೈಸ್ತರ ಕಣ್ಣೀರಿಗೆ ಕಾರಣವಾಯ್ತು. ಕನಿಷ್ಠ ಗುಡ್ ಫ್ರೈಡೇ ಹಬ್ಬದವರೆಗೂ ಏಸು ಪ್ರತಿಮೆ ತೆರವು ಮಾಡದಂತೆ ಮನವಿ ಮಾಡಿದೆವು. ಆದ್ರೆ, ಅಧಿಕಾರಿಗಳು ಇದಕ್ಕೆ ಸ್ಪಂದಿಸಲಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ರು.