ಬೆಂಗಳೂರು: ಇಂದು ಬೆಳಗ್ಗೆ 11 ಗಂಟೆಗೆ 2020-21 ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಸಿಎಂ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಯಾವೆಲ್ಲ ಕೊಡುಗೆ ಸಿಗಲಿದೆ ಎಂಬ ನಿರೀಕ್ಷೆ ಹೆಚ್ಚಿದೆ.
ಬಜೆಟ್: ಸಾಲಮನ್ನಾ ನಿರೀಕ್ಷೆಯಲ್ಲಿ ರಾಜ್ಯ ರೈತರು - ಸಾಲಮನ್ನಾದ ನಿರೀಕ್ಷೆಯಲ್ಲಿ ರಾಜ್ಯದ ರೈತರು
2020-21 ನೇ ಸಾಲಿನ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಎಂ ಬಿಎಸ್ವೈ ಏನೆಲ್ಲಾ ಕೊಡುಗೆ ಕೊಡಬಹುದು ಎಂಬ ಕುತೂಹಲ ಮೂಡಿದೆ.
ಈ ಬಗ್ಗೆ ಮಾತನಾಡಿರುವ ಹಸಿರು ಸೇನೆ ಹಾಗೂ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಚುನಾವಣೆಗೆ ಮೊದಲು ಕೊಟ್ಟ ಭರವಸೆ ಈಡೇರಿಸಬೇಕಿದೆ. ರೈತರ ಎಲ್ಲಾ ಸಾಲಗಳಲ್ಲಿ ಒಂದು ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಮಾಡಬೇಕು. ಅಥವಾ ಕುಮಾರಸ್ವಾಮಿ ಯೋಜನೆಯಲ್ಲಿ ಉಳಿದಿದ್ದ 25 ಸಾವಿರ ಕೋಟಿ ಸಾಲಮನ್ನಾ ಮಾಡ್ತಾರೋ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಡಾ. ಸ್ವಾಮಿನಾಥನ್ ವರದಿ ಆಧರಿಸಿ ಬೆಳೆಗಳಿಗೆ ಯೋಗ್ಯ ಬೆಲೆ ನೀಡಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ಆನ್ ಲೈನ್ ಟ್ರೇಡಿಂಗ್ ಆರಂಭಿಸಬೇಕು. ನೆರೆ ಪ್ರವಾಹಗಳಲ್ಲಿ ಆಸ್ತಿ, ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದರು.
ಇನ್ನು ಗೋದಾವರಿ ನದಿ ನೀರಿನಲ್ಲಿ ಕರ್ನಾಟಕದ ಪಾಲು ಸುಮಾರು 24.50 ಟಿಎಂಸಿ ಇದೆ. ಕೃಷ್ಣಾ ನದಿ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿಲ್ಲ, ಆಲಮಟ್ಟಿ ಅಣೆಕಟ್ಟಿನ ನೀರಿನ ಸ್ಟೋರೇಜ್ ಪ್ರಮಾಣ ಹೆಚ್ಚು ಮಾಡಬೇಕಿದೆ. ಮಹಾದಾಯಿ, ಮೇಕೆದಾಟು ಯೋಜನೆಗಳನ್ನೂ ಕೈಗೆ ತೆಗೆದುಕೊಳ್ಳಬೇಕಿದೆ. ಗ್ರಾಮೀಣ ಮಹಿಳೆಯರು ಸಾಲದ ವ್ಯವಸ್ಥೆಯಿಂದ ಬೇಸತ್ತಿದ್ದು, ಮೈಕ್ರೋ ಫೈನಾನ್ಸ್ ವ್ಯವಸ್ಥೆಯನ್ನು ಸದೃಢ ಮಾಡಬೇಕು. ಗ್ರಾಮೀಣ ಜನರನ್ನು ಸದೃಢ ಮಾಡಲು ಅಗತ್ಯ ಯೋಜನೆಗಳನ್ನು ಸರ್ಕಾರ ಅನುದಾನಲ್ಲಿ ಮೀಸಲಿಡಬೇಕು. ರೈತರ ವಲಸೆ, ಅತ್ಮಹತ್ಯೆ ತಡೆಯಲು, ರೈತರನ್ನು ಬಲಪಡಿಸಲು ಅಗತ್ಯ ಯೋಜನೆ ಜಾರಿ ಮಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.