ಬೆಂಗಳೂರು:ತಂತ್ರಜ್ಞಾನ ಎಷ್ಟೇ ಬೆಳೆದರೂ ಜನರು ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಸೈಬರ್ ಅಪರಾಧಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ 'ವರ್ಕ್ ಫ್ರಂ ಹೋಮ್ ವಂಚನೆ ಜಾಲ'(Work from home fraud case) ಬೆಳಕಿಗೆ ಬಂದಿದೆ.
ಇದೇನಪ್ಪಾ ಅಂತೀರಾ..? ಕೊರೋನಾ ಲಾಕ್ಡೌನ್ನಿಂದ ವರ್ಕ್ ಫ್ರಂ ಹೋಮ್ ಪದ್ಧತಿ(Work from home system) ಹೆಚ್ಚಾಗಿ ಚಾಲ್ತಿಗೆ ಬಂತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಹೊಸದಾಗಿ ಕೆಲಸ ಹುಡುಕುತ್ತಿರುವ ಯುವಕರನ್ನು ಟಾರ್ಗೆಟ್ ಮಾಡಿ ಉದ್ಯೋಗ ನೀಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದಾರೆ.
ಈ ಬಗ್ಗೆ ಆಗ್ನೇಯ ಹಾಗೂ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪುನೀತ್ ಪೊನ್ನಪ್ಪ ಹಾಗೂ ಹರ್ಷವರ್ಧನ್ ಎಂಬುವರು ಈ ಜಾಲದಿಂದ ಮೋಸ ಹೋದ ಬಗ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಎನ್‌ಸಿಬಿ ಕಾರ್ಯಾಚರಣೆ: ಬರೋಬ್ಬರಿ 1,500 ಕೆಜಿ ಗಾಂಜಾ ವಶ
ಕೆಲ ದಿನಗಳ ಹಿಂದೆ ಪುನೀತ್ ಪೊನ್ನಪ್ಪ ಎಂಬುವರಿಗೆ ಕರೆ ಮಾಡಿದ್ದ ವಂಚಕನೊಬ್ಬ ವರ್ಕ್ ಫ್ರಂ ಹೋಮ್ ಆಧಾರದ ಮೇಲೆ ಇ ಕಾಮರ್ಸ್ ಕಂಪನಿಯಿಂದ ರಿಚಾರ್ಜ್ ಕೆಲಸ ನೀಡುವುದಾಗಿ 5.54 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹರ್ಷವರ್ಧನ್ ಎಂಬುವರಿಗೆ ಅಮೇಜಾನ್ನಿಂದ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ವಂಚಿಸಿದ್ದಾನೆ. ಈ ಪ್ರಕರಣಗಳ ಸಂಬಂಧ ಪೊಲೀಸರು ವಂಚಕರ ಬೆನ್ನಟ್ಟಿದ್ದಾರೆ.