ಬೆಂಗಳೂರು : ವಿದೇಶಿ ಉತ್ಪನ್ನಗಳ ಮಾರುಕಟ್ಟೆ ಪೈಪೋಟಿ ನಡುವೆ ನಮ್ಮ ಸ್ಥಳೀಯ ಉತ್ಪನ್ನ ಮಾರಾಟಗಾರರು ಕಂಡು ಕಾಣದಂತೆ ಆಗಿದ್ದರು. ಇದೀಗ ನಮ್ಮದೇ ಉತ್ಪನ್ನಗಳು ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಲು ಅವಕಾಶ ಕಲ್ಪಿಸಲಾಗಿದೆ. 2022-2023ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಒನ್ ಸ್ಟೇಶನ್ ಒನ್ ಪ್ರಾಡಕ್ಟ್ ಯೋಜನೆಯು ಇದೀಗ ಸ್ಥಳೀಯ ಕುಶಲಕರ್ಮಿಗಳ ಜೀವನಕ್ಕೆ ಹೊಸ ರೂಪ ಸಿಕ್ಕಿದೆ.
ಒನ್ ಸ್ಟೇಶನ್ ಒನ್ ಪ್ರಾಡಕ್ಟ್ ಯೋಜನೆ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆಯ ಮೊಟ್ಟಮೊದಲ ಮಳಿಗೆ ಇಂದು ಆರಂಭವಾಗಿದೆ. 15 ದಿನಗಳವರೆಗೆ ಪ್ರಾಯೋಗಿಕ ಯೋಜನೆಯಾಗಿ ನಿಲ್ದಾಣದಲ್ಲಿ ಈ ಮಳಿಗೆ ಇರಲಿದ್ದು, ನಂತರದ ದಿನದಲ್ಲಿ ಇದನ್ನ ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ. ಮಾರಾಟಗಾರರು ನಿಲ್ದಾಣದ ಆವರಣದಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಸ್ತುಗಳನ್ನ ಮಾರಾಟ ಮಾಡಬಹುದು. ಇದಕ್ಕಾಗಿ ಮಳಿಗೆ ಶುಲ್ಕವಾಗಿ 500 ರೂ. ನಿಗದಿ ಮಾಡಲಾಗಿದೆ.
ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಲ್ಲಿ ಸ್ಥಳೀಯ ಕುಶಲಕರ್ಮಿಗಳು, ಉತ್ಪನ್ನಗಳು, ಉದ್ಯಮವನ್ನು ಉತ್ತೇಜಿಸಲು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರತಿ ರೈಲು ನಿಲ್ದಾಣವನ್ನು ಉತ್ಪನ್ನದ ಪ್ರಚಾರ ಮತ್ತು ಮಾರಾಟ ಕೇಂದ್ರವನ್ನಾಗಿ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಯೋಜನೆಯು ಮೊಟ್ಟ ಮೊದಲು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಶುರುವಾಗಿದೆ ಎಂಬುದೇ ವಿಶೇಷ.