ಬೆಂಗಳೂರು:ವಿಧಾನಸಭೆಯಲ್ಲಿ ಉದ್ದೇಶಿಸಲಾಗಿದ್ದ ಎರಡು ದಿನಗಳ 'ಒಂದು ದೇಶ, ಒಂದು ಚುನಾವಣೆ' ಮೇಲಿನ ವಿಶೇಷ ಚರ್ಚೆ ಪ್ರತಿಪಕ್ಷಗಳ ಪ್ರತಿಭಟನೆ ಮಧ್ಯೆ ಸಾದ್ಯವಾಗಲಿಲ್ಲ.
ಕಾರ್ಯ ಕಲಾಪದ ಪ್ರಕಾರ ಸ್ಪೀಕರ್ ಕಾಗೇರಿ ಬಜೆಟ್ ಅಧಿವೇಶನದ ಮೊದಲ ಎರಡು ದಿನ ಅಂದರೆ ಮಾರ್ಚ್ 4 ಮತ್ತು 5ರಂದು ಒಂದು ದೇಶ ಒಂದು ಚುನಾವಣೆ ಮೇಲೆ ವಿಶೇಷ ಚರ್ಚೆ ನಡೆಡಲು ನಿರ್ಧರಿಸಿದ್ದರು. ಆದರೆ, ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲ ಮಧ್ಯೆ ವಿಶೇಷ ಚರ್ಚೆ ಸಾಧ್ಯವಾಗಲಿಲ್ಲ. ಪ್ರತಿಪಕ್ಷ ಕಾಂಗ್ರೆಸ್ ಮೊದಲ ದಿನವೇ ಒಂದು ದೇಶ ಒಂದು ಚುನಾವಣೆ ವಿಶೇಷ ಚರ್ಚೆ ಪ್ರಸ್ತಾವನೆಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿತು.
ಇದನ್ನೂ ಓದಿ:ಮಾಧ್ಯಮಗಳು ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ 6 ಸಚಿವರು!
ಒಂದು ದೇಶ ಒಂದು ಚುನಾವಣೆ ಯೋಚನೆಯೇ ಅವಾಸ್ತವಿಕ. ಬೇರೆ ಸಿದ್ಧಾಂತವಿಟ್ಟುಕೊಂಡು ಇಂತಹ ವಿಚಾರದ ಚರ್ಚೆ ಬೇಡ. ಸ್ಪೀಕರ್ ವಿಶೇಷಾಧಿಕಾರ ದುರುಪಯೋಗ ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು.
ಗದ್ದಲದ ನಡುವೆ ಸಿಎಂ ವಿಶೇಷ ಚರ್ಚೆ ಸಂಬಂಧ ಭಾಷಣ ನಡೆಸಿದರು. ಇತ್ತ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. ಭದ್ರಾವತಿ ಶಾಸಕ ಸಂಗಮೇಶ್ ಅಮಾನತು ಹಿಂದಕ್ಕೆ ಪಡೆಯುವಂತೆಯೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಪ್ರತಿಭಟನೆ ವಾಪಸ್ ಪಡೆಯುವಂತೆ ಸ್ಪೀಕರ್ ಮನವಿ ಮಾಡಿದರು. ನೀವು ನಿಮ್ಮ ನಿಮ್ಮ ಸ್ಥಳಗಳಿಗೆ ತೆರಳಿ. ಅಲ್ಲಿ ಕುಳಿತು ಇದಕ್ಕೆ ವಿರೋಧಬೇಕಾದರೆ ವ್ಯಕ್ತಪಡಿಸಿ. ಅಲ್ಲಿ ನಿಂತು ನಿಮ್ಮ ವಿರೋಧ ಹೊರಹಾಕಿ. ಇಲ್ಲಿ ಸದನದ ಬಾವಿಯಲ್ಲಿ ಧರಣಿ ಮಾಡುವುದು ಬೇಡ ಎಂದರು.
ಸ್ಪೀಕರ್ ಮನವಿಗೂ ಸ್ಪಂದಿಸದ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಮತ್ತಷ್ಟು ಜೋರು ಘೋಷಣೆ ಕೂಗತೊಡಗಿದರು. ಬಳಿಕ ಸ್ಪೀಕರ್ 'ಒಂದು ದೇಶ, ಒಂದು ಚುನಾವಣೆ' ವಿಶೇಷ ಚರ್ಚೆ ಮುಂದುವರಿಯಲಿದೆ ಎಂದು ಹೇಳಿ ಸದನವನ್ನು ಸೋಮವಾರ 12 ಗಂಟೆಗೆ ಮುಂದೂಡಿದರು.