ಕರ್ನಾಟಕ

karnataka

ETV Bharat / city

ಕೋವಿಡ್ ಪರಿಹಾರ ಕುರಿತು ತಪ್ಪು ಮಾಹಿತಿ: ಶ್ರೀರಾಮುಲು ವಿರುದ್ಧ ಸದನದಲ್ಲಿ ಕೋಲಾಹಲ - Sriramulu Misinformation Creates debate in Assembly

ಸಚಿವ ಶ್ರೀರಾಮುಲು ಬಾಯಿತಪ್ಪಿ ಕೋವಿಡ್​​ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ ನೀಡಲಾಗಿದೆ ಎಂದು ಹೇಳಿದ್ದು ಸರಿಯಲ್ಲ. ನಾನು ಕೊಟ್ಟಿಲ್ಲ, ಆದರೆ ಪರಿಹಾರ ಹಣ ತೆಗೆದಿಟ್ಟಿರುವುದು ನಿಜ. ಮುಂದೆ ಅದನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೊಟ್ಟ ಭರವಸೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ- ಮಾಜಿ ಮುಖ್ಯಮಂತ್ರಿ ಬಿ.ಎಸ್.​.ಯಡಿಯೂರಪ್ಪ

Assembly session
ವಿಧಾನಸಭೆ

By

Published : Sep 23, 2021, 10:46 PM IST

ಬೆಂಗಳೂರು: ಕೋವಿಡ್​​​ನಿಂದ ಮೃತಪಟ್ಟವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸಚಿವ ಶ್ರೀರಾಮುಲು ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಇಂದು ಸಂಜೆ ಕೋಲಾಹಲ, ವಾಗ್ವಾದಕ್ಕೆ ಕಾರಣವಾಯಿತು.

ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಶ್ರೀರಾಮುಲು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ ಎಂದರು.

ಈ ವೇಳೆ ಕಾಂಗ್ರೆಸ್ ಶಾಸಕರು ಸುಳ್ಳೇ ಸುಳ್ಳು ಎಂದು ಕೂಗಾಡಿದರು.‌ ಎಲ್ಲಿ ಪರಿಹಾರ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು?. ಎಷ್ಟು ಜನರಿಗೆ ಒಂದು ಲಕ್ಷ ಕೊಟ್ಟಿದ್ದೀರಿ ಎಂದು ಲೆಕ್ಕ ಕೊಡಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಆದೇಶವೂ ಆಗಿದೆ. ಆದರೆ ಹಣ ಇನ್ನು ಯಾರಿಗೂ ತಲುಪಿಲ್ಲ. ಆದರೆ ಪ್ರತಿಯೊಬ್ಬರಿಗೆ ಕೊಡುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಇಂತಹ ಗಂಭೀರ ವಿಚಾರದಲ್ಲಿ ಸರ್ಕಾರದ ಮಂತ್ರಿಗಳು ಕೋವಿಡ್‌ನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ. ಕೊಟ್ಟಿದೆ ಎಂದು ಹೇಳುತ್ತಾರೆ. ಆದರೆ ಮಾಜಿ ಸಿಎಂ ಕೊಟ್ಟಿಲ್ಲ ಎನ್ನುತ್ತಾರೆ.‌ ಈ ಮೂಲಕ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ್ ಖರ್ಗೆ ಎತ್ತಿದ ಕ್ರಿಯಾಲೋಪವನ್ನು ಪರಿಶೀಲನೆ ಮಾಡುತ್ತೇನೆ ಎಂದು ಸಭಾಧ್ಯಕ್ಷರ ಪೀಠದಲ್ಲಿ ಇದ್ದ ಮಹಾಂತೇಶ್ ಕೌಜಲಗಿ ಭರವಸೆ ನೀಡಿದರು.

ಕಾಂಗ್ರೆಸ್ ಶಾಸಕರ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಎದ್ದು ನಿಂತು ಈ ಕುರಿತು ಸ್ಪಷ್ಟನೆ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಶ್ರೀರಾಮುಲು ಬಾಯಿ ತಪ್ಪಿ ಕೋವಿಡ್​​ನಿಂದ ಮೃತಪಟ್ಟವರಿಗೆ ಒಂದು ಲಕ್ಷ ನೀಡಲಾಗಿದೆ ಎಂದು ಹೇಳಿದ್ದು ಸರಿಯಲ್ಲ. ನಾನು ಕೊಟ್ಟಿಲ್ಲ, ಆದರೆ ಪರಿಹಾರ ಹಣ ತೆಗೆದಿಟ್ಟಿರುವುದು ನಿಜ. ಮುಂದೆ ಅದನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೊಟ್ಟ ಭರವಸೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಮನೆ ಮನೆಗೆ ಹೋಗಿ ಒಂದು ಲಕ್ಷ ರೂ. ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವೈಫಲ್ಯ:

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೋವಿಡ್ 2ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ಕೊಟ್ಟಿದ್ದರು.‌ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದರು. ಆದರೆ ಸರ್ಕಾರ ಸಿದ್ದತೆ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ.‌

ಕೋವಿಡ್​​ ಮೊದಲ ಹಾಗೂ 2ನೇ ಅಲೆಯಲ್ಲಿ ಸಾವಿರಾರು ಮೃತಪಟ್ಟಿದ್ದಾರೆ. ಆದರೆ, ಕೋವಿಡ್ ಪ್ರಕರಣ ಹಾಗೂ ಸಾವಿನ ಬಗ್ಗೆ ಸರ್ಕಾರದ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದರು.37,603 ಜನರ ಸಾವು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ಬೇರೆ ವರದಿಗಳ ಪ್ರಕಾರ ಮೂರುವರೆ ಲಕ್ಷದಿಂದ ನಾಲ್ಕು ಲಕ್ಷ ಜನ ಕರ್ನಾಟಕದಲ್ಲಿ ಮೃತಪಟ್ಟಿದ್ದಾರೆ ಎಂದರು.

ಚಾಮರಾಜ ನಗರ ದುರಂತ ಪ್ರಕರಣ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಆಕ್ಸಿಜನ್ ನಿಂದ ಸತ್ತಿಲ್ಲ ಎಂದು ಹೇಳಿದ್ರು. ರಸ್ತೆ, ಮನೆ, ಆಸ್ಪತ್ರೆಗಳಲ್ಲಿ, ದಾರಿಮಧ್ಯೆ ಸತ್ತಿದ್ದಾರೆ. ಐಸಿಯು ಬೆಡ್ ಗಳಿಲ್ಲದೇ ಸತ್ತಿದ್ದಾರೆ. ಚಾಮರಾಜ ನಗರದಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ದಾರೆ.

ಸಚಿವ ಸುಧಾಕರ್, ಅಂದಿನ ಸಚಿವ ಸುರೇಶ್ ಕುಮಾರ್ ಕೂಡ ಹೋಗಿದ್ದರು. ಅಲ್ಲಿ ಸಚಿವರು ಹೋಗಿದ್ರೆ, ಇಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡಿದ್ರು. ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ ಎಂದರು. ಆಕ್ಸಿಜನ್ ನಿಂದ ಮೂರು ಜ‌ನ ಸತ್ತಿರಬಹುದು ಎಂದು ಸುಧಾಕರ್ ಹೇಳಿದ್ರು. ಡಿಹೆಚ್​​ಓ ಗಳು 36 ಜನ ಸತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದು ಸತ್ಯಾವೋ, ಸುಳ್ಳೋ ?. ನಾವು ಹೋದಾಗ ಅದೇ ಡಾಕ್ಟರ್ ಗಳು 36 ಜನ ಸತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಕೋವಿಡ್ ಪರಿಕರ‌ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಸ್ಯಾನಿಟೈಸರ್‌ಗೆ ಹೆಚ್ಚು ಬೆಲೆ ನೀಡಿ ಖರೀದಿಸಲಾಗಿದೆ. 9.66 ಕೋಟಿ ಮೌಲ್ಯದ ಸ್ಯಾನಿಟೈಸರ್ ಖರೀದಿ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಸ್ಯಾನಿಟೈಸರ್ ಕೊಳಚೆ ನೀರಿನಂತೆ ಕಾಣುತ್ತದೆ ಎಂದು ಸದನದಲ್ಲಿ ಸ್ಯಾನಿಟೈಸರ್ ಬಾಟಲ್ ಪ್ರದರ್ಶನ ಮಾಡಿದರು.

ಡ್ರಗ್ಸ್ ಕಂಟ್ರೋಲರ್ ಈ ಸ್ಯಾನಿಟೈಸರ್ ತಿರಸ್ಕರಿಸಿದೆ. ಈಗಾಗಲೇ ಕಳಪೆ‌ ಸ್ಯಾನಿಟೈಸರ್‌ಗೆ 2 ಕೋಟಿ ಹಣ ನೀಡಲಾಗಿದೆ. ಒಂದು ಕಡೆ ಪರಿಹಾರಕ್ಕೆ ದುಡ್ಡಿಲ್ಲ ಅಂತಾರೆ. ಇನ್ನೊಂದು ಕಡೆ ಇಂತಹ ಸ್ಯಾನಿಟೈಸರ್ ಖರೀದಿ ಮಾಡುತ್ತಾರೆ. ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗಬೇಕು. ಸಚಿವ ಅಥವಾ ಅಧಿಕಾರಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರು ಮೋದಿ ಬಗ್ಗೆ ಲಘುವಾಗಿ ಮಾತನಾಡುವ ಪ್ರಯತ್ನ ಮಾಡಿದರು. ಈ ವೇಳೆ ಯಡಿಯೂರಪ್ಪ ಮಾತನಾಡಿ, ಸಿದ್ದರಾಮಯ್ಯಗೆ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನನ್ನ ಬಗ್ಗೆ, ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿ. ಆದರೆ ಪ್ರಧಾನಿಗಳ ಬಗ್ಗೆ ಯಾವ ಟೀಕೆ ಮಾಡಬೇಡಿ. ಇಡೀ ಜಗತ್ತು ಮೋದಿ ಅವರನ್ನು ಮೆಚ್ಚಿಕೊಂಡಿದೆ ಎಂದರು.

ಸದನದಲ್ಲಿ ಮೋದಿ ಗುಣಗಾನ:

ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಹೇಗೆ ನಿರ್ವಹಣೆ ಮಾಡಿದ್ರು ಎಂದು ಹಗುರವಾಗಿ ಮಾತನಾಡಬೇಡಿ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು, ಮೋದಿ ಅವರ ಸಾಧನೆಯನ್ನು ಹೊಗಳಿದ್ದಾರೆ.‌ ಇಡೀ ಜಗತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು ಒಪ್ಪಿ ಹೊಗಳಿದೆ. ಅವರ ಬಗ್ಗೆ ಹಗುರವಾಗಿ ಮಾತಾಡುವ ನೈತಿಕ ಸ್ಥೈರ್ಯ, ಧೈರ್ಯ ನಿಮಗೆ ಇಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ತಿರುಗೇಟು ನೀಡಿದರು.

ಉಚಿತವಾಗಿ ಲಸಿಕೆ ನೀಡಿದ್ದರ ಬಗ್ಗೆ ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದೆ.ಅವರ ಬಗ್ಗೆ ಮಾತಾಡಿ ನೀವು ನಿಮ್ಮ ಗೌರವ ಕಡಿಮೆ ಮಾಡಿಕೊಳ್ಳಬೇಡಿ. ಲಸಿಕೆ, ಚಿಕಿತ್ಸೆ ನೀಡಿದ್ದರ ಬಗ್ಗೆ ಜಗತ್ತು ಮೆಚ್ಚಿದೆ. ನೀವು ನಮ್ಮ ಲೋಪಗಳನ್ನು ಹೇಳಿ ಸರಿಪಡಿಸಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಯಡಿಯೂರಪ್ಪ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರ ಬಗ್ಗೆ ನಾನು ಟೀಕೆ ಮಾಡಲಿಲ್ಲ. ದಾವೊಸ್‌ಗೆ ಹೋಗಿದ್ದಾಗ ಕಳೆದ ವರ್ಷ ಹೇಳಿ ಕೊಟ್ಟಿದ್ದರು. ಎರಡನೇ ಅಲೆಗೂ ಮುನ್ನವೇ ಕೋವಿಡ್ ಗೆದ್ದಿದ್ದೇವೆ ಎಂದಿದ್ದರು. ನಂತರ ತಟ್ಟೆ, ಜಾಗಟೆ, ಗಂಟೆ ಬಾರಿಸಿ ಎಂದರು. ದೀಪ ಹಚ್ಚಿ, ಚಪ್ಪಾಳೆ ತಟ್ಟಿ ಎಂದರು.

ಮಾತಿನ ಕಚಮಕಿ:

ಸಿದ್ದರಾಮಯ್ಯ ಮಾತಿಗೆ ಸದನದಲ್ಲಿ ಕೋಲಾಹಲ ಉಂಟಾಯಿತು. ಆಡಳಿತ-ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಯಡಿಯೂರಪ್ಪರನವರೇ ಈಗ ಕೋವಿಡ್ ಕಡಿಮೆ ಆಗಿದೆಯಾ?. ಗಂಟೆ ಬಾರಿಸಿ, ದೀಪ ಹಚ್ಚಿ ಕೊರೊನಾ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದಾಗ, ಇದರಿಂದ ಕೆರಳಿದ ಆಡಳಿತ ಪಕ್ಷ ಸದಸ್ಯರು, ಮೋದಿ ಅವರ ಬಗ್ಗೆ ಮಾತಾಡಿದ್ದಕ್ಕೆ ಸಚಿವ ಗೋವಿಂದ ಕಾರಜೋಳ, ಸೋಮಣ್ಣ ಮತ್ತಿತರರು ಸಿದ್ದರಾಮಯ್ಯ ಮೇಲೆ ಮುಗಿ ಬಿದ್ದರು.

ಸಚಿವ ಸುಧಾಕರ್ ಮಾತನಾಡಿ, ‌ಸಿದ್ದರಾಮಯ್ಯ ಅವರು ಹೇಳಿದ್ರು ಜಾಗಟೆ, ಗಂಟೆ ಬಾರಿಸಲು ಮೋದಿ ಹೇಳಿದ್ರು ಎಂದು ವ್ಯಂಗ್ಯ ಮಾಡಿದ್ರು. ಆದರೆ ಮೋದಿ ಅವರು ಹೇಳಿದ್ರು ಆರೋಗ್ಯ ಸಂದರ್ಭದಲ್ಲಿ ಕೆಲಸ ಮಾಡಿದವರಿಗೆ ಚಪ್ಪಾಳೆ ತಟ್ಟಿಸಿದ್ರು ಎಂದರು.

ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿ, ಬಹಳ ದೇಶದಲ್ಲಿ ಕೋವಿಡ್ ನಿಂದ ನಿರ್ವಹಣೆ ಮಾಡಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಇನ್ನೂ ವ್ಯಾಕ್ಸಿನ್ ಕೊಟ್ಟಿಲ್ಲ ಎಂದರು. ಸಿದ್ದರಾಮಯ್ಯ ಅವರು ಕೇಳಿರುವ ಪ್ರಶ್ನೆಗೆ ಉತ್ತರ ತಿಳಿಯಲು ನನಗೂ ಆಸಕ್ತಿ ಇದೆ. ಬೇರೆ ದೇಶದಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ಕೊಡಲಾಗಿದೆ. ನೀವು ಏನ್ ಹೇಳ್ತಿರಿ ಎಂದು ಸ್ಪೀಕರ್ ಕೇಳಿದಾಗ, ಸಚಿವ ಸುಧಾಕರ್, ಐಸಿಎಂಆರ್ ನಿಂದ ಕೊಡುವುದಕ್ಕೆ ತಯಾರಿ ನಡೆಯುತ್ತಿದೆ. ಆದರೆ ನಮ್ಮ ತಜ್ಞರು ಏನಾದ್ರು ಹೆಚ್ಚು ಕಡಿಮೆ ಆದರೆ ನಾವು ಜವಾಬ್ದಾರಿ ಅಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜನರಿಗೆ ಬೆಡ್ ಸಿಕ್ಕಿಲ್ಲ. ಆಸ್ಪತ್ರೆ ಇರಲಿಲ್ಲ. ಕೋವಿಡ್​​ನಿಂದ ಸತ್ತವರಿಗೆ ಸರ್ಟಿಫಿಕೇಟ್ ಕೊಟ್ಟಿಲ್ಲ.‌ ಆಕ್ಸಿಜನ್ ಕೊರತೆಯಿಂದ ಸಾವು ಆಗಿಲ್ಲ ಎಂದು ಪಾರ್ಲಿಮೆಂಟ್ ನಲ್ಲಿ ಕೆ.ಸಿ ವೇಣುಗೋಪಾಲ್ ಪ್ರಶ್ನೆಗೆ ಉತ್ತರ ಕೊಡುತ್ತಾರೆ.‌ ರಾಜ್ಯ ಸರ್ಕಾರ ಕೇವಲ ಮೂರು ಜನರ ಸಾವಾಗಿದೆ ಎಂದಿದೆ. ‌ನಾಲ್ಕು ಲಕ್ಷ ಜನ ಕೋವಿಡ್ ನಿಂದ ಸತ್ತಿದ್ದಾರೆ ಅವರಿಗೆ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಏನಾದರೂ ಮಾಡಿದರೆ ಯಡಿಯೂರಪ್ಪ ಅವರು ಒಬ್ಬರೇ ಮಾಡಿದ್ದಾರೆ.‌ ಉಳಿದವರು ಯಾರು ಮಾಡಿಲ್ಲ ಎಂದು ಆರೋಪ ಮಾಡಿದರು.

ಇದನ್ನೂ ಓದಿ:ವಿಧಾನ ಪರಿಷತ್​​ನಲ್ಲಿ 'ಪೂರಕ ಅಂದಾಜು ಧನ ವಿನಿಯೋಗ ವಿಧೇಯಕ' ಅಂಗೀಕಾರ

ABOUT THE AUTHOR

...view details