ಬೆಂಗಳೂರು :ಒಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜೊತೆ ಹಲವು ನಿರ್ಬಂಧ ವಿಧಿಸಿ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಗರದ ಎಲ್ಲಾ ಡಿಸಿಪಿಗಳೊಂದಿಗೆ ಸಭೆ ನಡೆಸಿ, ವೀಕೆಂಡ್ ಕರ್ಫ್ಯೂ ಜಾರಿ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಆಯುಕ್ತರು, ಸರ್ಕಾರದ ಆದೇಶಗಳನ್ನು ಜಾರಿ ಮಾಡಲು ಸಿದ್ಧರಾಗಿದ್ದೇವೆ. ಇಂದಿನ ಸಭೆಯಲ್ಲಿ ನಿಯಮಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ವೀಕೆಂಡ್ನಲ್ಲಿ ಎಲ್ಲೆಲ್ಲಿ ಚೆಕ್ಪೋಸ್ಟ್ ಹಾಕಬೇಕು. ಎಲ್ಲೆಲ್ಲಿ ಬ್ಯಾರಿಕೇಡ್ ಹಾಕಬೇಕು ಎಂಬುದರ ಬಗ್ಗೆ ಸಮಾಲೋಚನೆ ಮಾಡಲಾಗಿದೆ ಎಂದರು.
ಆಯಾಯ ವಿಭಾಗದ ಪೊಲೀಸರು ಚೆಕ್ಪೋಸ್ಟ್ ಹಾಕಲಿದ್ದಾರೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ. ಈ ಬಾರಿ ಯಾವುದೇ ಪಾಸ್ಗಳನ್ನು ಜಾರಿ ಮಾಡುವುದಿಲ್ಲ. ತಮ್ಮ ಐಡೆಂಟಿಟಿ ಕಾರ್ಡ್, ಪ್ರಯಾಣದ ಟಿಕೆಟ್ಗಳು ಸೇರಿ ಸೂಕ್ತ ದಾಖಲೆ ನೀಡಿದರೆ ಮಾತ್ರ ಓಡಾಡುವುದಕ್ಕೆ ಅನುಮತಿ ನೀಡಲಾಗುವುದು ಎಂದರು.