ಬೆಂಗಳೂರು:ಒಮಿಕ್ರೋನ್ ಕೋವಿಡ್ ರೂಪಾಂತರಿ ಭೀತಿಯಿಂದ ಬೆಳಗಾವಿ ಅಧಿವೇಶನದ ಮೇಲೆ ಕರಿಛಾಯೆ ಬಿದ್ದಿದೆ. ಇತ್ತ ಶಾಸಕರು ಮಾತ್ರ ಅಲ್ಲ, ಸಚಿವಾಲಯದ ನೌಕರರು ರೂಪಾಂತರಿ ಆತಂಕದ ಮಧ್ಯೆ ಬೆಳಗಾವಿ ಅಧಿವೇಶನಕ್ಕೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸಚಿವಾಲಯದ ನೌಕರರ ಆತಂಕಕ್ಕೆ ಕಾರಣ ಏನು ಎಂಬ ವರದಿ ಇಲ್ಲಿದೆ.
ರಾಜ್ಯ ಸರ್ಕಾರ ಡಿ.13-24ರವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನಿರ್ಧರಿಸಿದೆ. ಕಳೆದ ಎರಡು ವರ್ಷದಿಂದ ಬೆಳಗಾವಿ ಅಧಿವೇಶನ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ಇದೀಗ ಒಮಿಕ್ರೋನ್ ಭೀತಿ ಸರ್ಕಾರದ ಬೆಳಗಾವಿ ಅಧಿವೇಶನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಾಡಿದೆ. ಅದರಲ್ಲೂ ಕರ್ನಾಟದಲ್ಲಿ ದೇಶದಲ್ಲೇ ಮೊದಲು ಒಮಿಕ್ರೋನ್ ಪತ್ತೆಯಾಗಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಅಧಿಕಾರಿಗಳು ಬೆಳಗಾವಿ ಅಧಿವೇಶನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೂಪಾಂತರಿ ಆತಂಕದ ಮಧ್ಯೆ ಜೀವ ಒತ್ತೆಯಿಟ್ಟು ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಸಮಜಂಸವಲ್ಲ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಸಚಿವಾಲಯ ನೌಕರರ ಆತಂಕ ಏನು?:
ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಬೆಳಗಾವಿಯಲ್ಲಿ ಅಧಿವೇಶನ ನಡೆಸದಂತೆ ಕೋರಿ ಸಿಎಂ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಹೊರಟ್ಟಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಬಗ್ಗೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಈಟಿವಿ ಭಾರತ ಜೊತೆ ಮಾತನಾಡಿ, ನೌಕರರು ವ್ಯಕ್ತಪಡಿಸುತ್ತಿರುವ ಆತಂಕ ಬಿಚ್ಚಿಟ್ಟಿದ್ದಾರೆ. ಒಮಿಕ್ರೋನ್ ಭೀತಿ ಜೋರಾಗಿದೆ. ಈ ವೇಳೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸಚಿವಾಲಯದ ನೌಕರರನ್ನು ಅಪಾಯಕ್ಕೆ ತಳ್ಳಿದಂತಾಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನದಲ್ಲಿ ನಡೆಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದು ಸಮಂಜಸವಲ್ಲ ಎಂದಿದ್ದಾರೆ.