ಬೆಂಗಳೂರು:ಕೊರೊನಾ ಹೊಸ ರೂಪಾಂತರಿ ತಳಿ 'ಓಮಿಕ್ರೋನ್' ದೇಶದೆಲ್ಲೆಡೆ ಭೀತಿ ಹುಟ್ಟಿಸಿದ ಕಾರಣ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಕಠಿಣ ನಿಯಮ ರೂಪಿಸಲು ನಾಳೆ(ಸೋಮವಾರ)ಆರೋಗ್ಯ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಕುರಿತಂತೆ ಚರ್ಚೆ ಆಗಲಿದೆ. ಈ ವೇಳೆ ಕಠಿಣ ನಿಯಮಗಳನ್ನ ಹೇರಬೇಕಾ? ಅಥವಾ ಬೇಡವಾ ಎಂಬುದರ ಬಗ್ಗೆ ನಿರ್ಧಾರ ಹೊರಬೀಳಲಿದೆ.
ಕ್ರಿಸ್ಮಸ್ಗಿಂತ ಹೆಚ್ಚಾಗಿ ಹೊಸ ವರ್ಷಾಚರಣೆ ಕಡೆ ಗಮನ ಹರಿಸಲಾಗಿದೆ. ಪಬ್‌ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಮತ್ತೆ ಫೀಲ್ಡ್ಗಿಳಿದ ಮಾರ್ಷಲ್ಗಳು:
ಹೊಸ ರೂಪಾಂತರಿ ತಳಿ ಭೀತಿ ಹಿನ್ನೆಲೆ ಸರ್ಕಾರ ಬೆಂಗಳೂರಲ್ಲಿ ಮಾರ್ಷಲ್ಗಳನ್ನು ಮತ್ತೆ ಅಖಾಡಕ್ಕಿಳಿಸಿದೆ. ಕೆ.ಆರ್. ಮಾರ್ಕೆಟ್ ಬಳಿ 20 ಮಾರ್ಷಲ್ಗಳನ್ನು ನಿಯೋಜಿಸಲಾಗಿದೆ. ಈ ಬಾರಿ ದಂಡ ಪ್ರಯೋಗಕ್ಕಿಂತ ಅರಿವು ಮೂಡಿಸುವ ಯತ್ನ ಮಾಡಲಾಗುತ್ತಿದೆ.
ಕೈಯಲ್ಲಿ ಮೈಕ್ ಹಿಡಿದು ಮಾಸ್ಕ್ ಬಳಸಿ ಎಂದು ಮಾರ್ಷಲ್ಗಳು ಅರಿವು ಮೂಡಿಸುತ್ತಿದ್ದಾರೆ. ಬೆಳಗಿನ ಪಾಳಿಯಲ್ಲಿ 10 ಮಂದಿ, ಮಧ್ಯಾಹ್ನದ ಪಾಳಿಯಲ್ಲಿ 10 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆಯಷ್ಟೇ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸಲಹೆ ನೀಡಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಜಾರಿ ಮಾಡಿದೆ. ಅದರಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಮಾರ್ಷಲ್ಗಳು ನಗರದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.