ಬೆಂಗಳೂರು:ಬೆಳಗಾವಿ ಅಧಿವೇಶನ ನಡೆಸುವ ಬಗ್ಗೆ ಅನುಮಾನ, ಆತಂಕ ಈಗಲೂ ಮುಂದುವರಿದಿದೆ. ಅಧಿಕಾರಿಗಳು, ಶಾಸಕರ ಒಂದು ವರ್ಗ Omicron ಭೀತಿ ಮಧ್ಯೆ ಬೆಳಗಾವಿ ಅಧಿವೇಶನಕ್ಕೆ ಬಲವಾದ ವಿರೋಧ ವ್ಯಕ್ತಪಡಿಸುತ್ತಿದೆ. ಆದರೂ ಸರ್ಕಾರ ಸದ್ಯ ಕೆಲ ಸುರಕ್ಷತಾ ಮಾರ್ಗಸೂಚಿಯೊಂದಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿಲುವು ತಳೆದಿದೆ.
ಕರ್ನಾಟಕದಲ್ಲಿ ಒಮಿಕ್ರೋನ್ ರೂಪಾತರಿ ಪತ್ತೆಯಾದ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಶಾಸಕರು ಹಾಗೂ ಅಧಿಕಾರಿ ವರ್ಗದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಒಮಿಕ್ರೋನ್ನ ಈ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ಅಪಾಯಕಾರಿ ಎಂಬ ಭೀತಿ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಆದರೂ ಕಳೆದ ಎರಡು ವರ್ಷದಿಂದ ಬೆಳಗಾವಿ ಅಧಿವೇಶನ ನಡೆಯದೇ ಇರುವುದರಿಂದ ಮತ್ತೆ ಈ ಬಾರಿ ಬೆಳಗಾವಿ ಅಧಿವೇಶನ ರದ್ದು ಮಾಡಿದರೆ, ಉತ್ತರ ಕರ್ನಾಟಕ ಜನರಿಗೆ ತಪ್ಪು ಸಂದೇಶ ನೀಡಿದಂತೆ ಆಗುತ್ತದೆ ಎಂಬ ಅನಿವಾರ್ಯತೆಗೆ ಕಟ್ಟು ಬಿದ್ದು ಸರ್ಕಾರ ಸದ್ಯ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿಲುವನ್ನು ತಳೆದಿದೆ. ಮುಂಜಾಗ್ರತಾ ಕ್ರಮದೊಂದಿಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ.
ಬೆಳಗಾವಿ ಅಧಿವೇಶನಕ್ಕೆ ಮುಂಜುಗ್ರತಾ ಕ್ರಮ ಏನು?:
ಸದ್ಯ ಸರ್ಕಾರ ಬೆಳಗಾವಿ ಅಧಿವೇಶನ ನಡೆಸುವ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಆದರೂ ಒಂದು ವೇಳೆ ಪ್ರಕರಣ ಹೆಚ್ಚಾದರೆ ಅಧಿವೇಶನ ನಡೆಸುವ ಬಗ್ಗೆ ಮರುಪರಿಶೀಲನೆ ನಡೆಸುವ ಚಿಂತನೆಯಲ್ಲಿದೆ.
ಸದ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಬೆಳಗಾವಿ ಅಧಿವೇಶನ ನಡೆಸುವ ನಿಲುವು ಹೊಂದಿದೆ. ಅದರಂತೆ ಬೆಳಗಾವಿಗೆ ಎರಡು ಡೋಸ್ ಲಸಿಕೆ ಪಡೆದ ಸಿಬ್ಬಂದಿಯನ್ನು ಕರೆದೊಯ್ಯಲು ಚಿಂತಿಸಲಾಗಿದೆ. ಇನ್ನು 50 ವರ್ಷ ಮೇಲ್ಪಟ್ಟ ಸಿಬ್ಬಂದಿ, ಅಸ್ತಮಾ, ದಿವ್ಯಾಂಗರು, ಇತರ ಖಾಯಿಲೆ ಹೊಂದಿರುವ ಸಿಬ್ಬಂದಿಗೆ ಬೆಳಗಾವಿ ಅಧಿವೇಶನದಿಂದ ವಿನಾಯಿತಿ ನೀಡಲು ಯೋಜಿಸಲಾಗಿದೆ.