ಬೆಂಗಳೂರು: ಜನರಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗಿದೆ. ರಾಜ್ಯದಲ್ಲಿ ಸದ್ಯ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಒಮಿಕ್ರಾನ್ ಸೋಂಕಿತರ ಸಂಪರ್ಕಿತದಲ್ಲಿದ್ದವರಿಗೂ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ, ಅವರ ಸ್ಯಾಂಪಲ್ಸ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳಿಸಲಾಗಿತ್ತು. ಇದೀಗ ಅವರೆಲ್ಲರ ಪರೀಕ್ಷಾ ವರದಿ ನೆಗಟಿವ್ ಬಂದಿದೆ.
ಒಮಿಕ್ರಾನ್ ಪರೀಕ್ಷೆ ಕುರಿತು ವೈದ್ಯರ ಮಾಹಿತಿ ಒಮಿಕ್ರಾನ್ ಅನ್ನು variant of concern ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಒಮಿಕ್ರಾನ್ ಸೋಂಕಿನ ಪರೀಕ್ಷೆ ಹೇಗೆ ಮಾಡಲಾಗುತ್ತೆ? ಕೋವಿಡ್ಗಿಂತ ಒಮಿಕ್ರಾನ್ ಪರೀಕ್ಷೆ ಎಷ್ಟು ಭಿನ್ನವಾಗಿ ಇರಲಿದೆ? ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಒಮಿಕ್ರಾನ್ ಪತ್ತೆಯಾಗೋಲ್ವಾ? ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲೇ ಹೇಗೆ ಸೋಂಕು ಪತ್ತೆಯಾಗಲಿದೆ? ಹೆಚ್ಚಿನ ಸಮಯಾವಕಾಶ ಪಡೆದುಕೊಳ್ಳಲು ಕಾರಣವೇನು ಎಂಬ ಅನುಮಾನ ಬರುವುದು ಸಹಜ. ಇದ್ರ ಬಗ್ಗೆ ತಜ್ಞರು 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ವೈದ್ಯರ ಮಾಹಿತಿ:
ಈ ಕುರಿತು ಮಾತಾನಾಡಿರುವ ರಾಜ್ಯ ಜಿನೋಮಿಕ್ ಸೀಕ್ವೆನ್ಸ್ ಸಮಿತಿಯ ತಜ್ಞ ವೈದ್ಯರಾಗಿರುವ ಡಾ. ವಿಶಾಲ್ ರಾವ್, ಜಿನೋಮಿಕ್ ಸೀಕ್ವೆನ್ಸ್ ಅನ್ನುವುದು ಸಾಮಾನ್ಯ ಪರೀಕ್ಷೆಯಂತೆ ಅಲ್ಲ. ಇತರೆ ಪರೀಕ್ಷೆಯಲ್ಲಿ ಮಾದರಿಯನ್ನು ಹಾಕಿದ ಕೂಡಲೇ ಫಲಿತಾಂಶ ಬಂದು ಬಿಡುತ್ತದೆ. ಆದರೆ ಜಿನೋಮಿಕ್ ಟೆಸ್ಟ್ನಲ್ಲಿ ಅಷ್ಟು ಸುಲಭ ಇಲ್ಲ. ಸ್ಯಾಂಪಲ್ಸ್ ಸಂಗ್ರಹಿಸಿದಾಗಿನಿಂದ ಹಿಡಿದು ಲ್ಯಾಬ್ಗೆ ಕಳುಹಿಸುವವರೆಗೆ ಗುಣಮಟ್ಟ ಪರೀಕ್ಷೆ ಮಾಡಬೇಕಾಗುತ್ತದೆ. ಸೀಕ್ವೆನ್ಸ್ಗೆ ಕಳುಹಿಸಿದಾಗ ಭಾಗಶಃ ವರದಿ ಸಿದ್ಧವಿರುತ್ತದೆ. ಆದರೆ ಆ ವರದಿಯನ್ನು ಡಿಎನ್ಎ ಲೈಬ್ರರಿ ಪ್ರಿಪ್ರೇಷನ್ಗೆ ಕಳುಹಿಸಲಾಗುತ್ತದೆ. ಇದು ಎರಡು ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಬಳಿಕ ಬಯೋ ಇನ್ಫಾರ್ಮ್ಯಾಟಿಕ್ (bioinformatic) ಆಗಿರುವ ಕಂಪ್ಯೂಟರ್ ಅನಾಲಿಸಿಸ್ಗೆ ಹೋದಾಗ ಅದು ಲಕ್ಷಾಂತರ ಜೀನ್ಗಳನ್ನು ಪರಾಮರ್ಶಿಸಲಿದೆ. ನಂತರ ಪ್ರೂಫ್ ರೀಡ್ ಮಾಡಿದ ಬಳಿಕವೇ ಒಮಿಕ್ರಾನ್ ಇದೆಯೋ ಇಲ್ವೋ ಅಂತ ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ತಿಳಿಯಲು ಸಾಧ್ಯ. ಇದು ಹತ್ತಾರು ಹಂತಗಳನ್ನು ದಾಟಿ ಬರಲಿದ್ದು, ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬ್ರಿಟನ್ನಿಂದ ಬೆಂಗಳೂರಿಗೆ ಬಂದ ಯುವಕನಿಗೆ ಕೋವಿಡ್ ಪಾಸಿಟಿವ್
ಮಣಿಪಾಲ್ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯರಾಗಿರುವ ಡಾ. ಸಂಜೀವ್ ಕತ್ತಿ ಪ್ರತಿಕ್ರಿಯಿಸಿ, ಜನರಲ್ಲಿ ಈಗ ಆರ್ಟಿ-ಪಿಸಿಆರ್ ಪರೀಕ್ಷೆ ಒಮಿಕ್ರಾನ್ ಸೋಂಕು ಪತ್ತೆ ಮಾಡುತ್ತೋ ಇಲ್ವೋ ಎಂಬ ಚಿಂತೆ ಕಾಡುತ್ತಿದೆ. ಆದರೆ ಜನರು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ, ಆರ್ಟಿ-ಪಿಸಿಆರ್ ನಲ್ಲಿ ಒಮಿಕ್ರಾನ್ ಸೋಂಕು ಡಿಟೆಕ್ಟ್ ಆಗುತ್ತೆ, ಆದರೆ ಒಮಿಕ್ರಾನ್ ಸೋಂಕಿನಿಂದಲೇ ಸೋಂಕಿತರಾಗಿದ್ದಾರಾ ಅಂತ ಹೇಳಲು ಸಾಧ್ಯವಿಲ್ಲ. ಒಮಿಕ್ರಾನ್ ನಿಂದಲೇ ಸೋಂಕು ತಗುಲಿರುವುದನ್ನು ತಿಳಿಯಲು ಇರುವುದು ಒಂದೇ ಮಾರ್ಗ ಅಂದರೆ ಸದ್ಯಕ್ಕೆ ಜೀನೋಮ್ ಸೀಕ್ವೆನ್ಸಿಂಗ್. ಕೆಲವೊಂದು ಆರ್ಟಿಪಿಸಿಆರ್ ಟೆಸ್ಟ್ಗಳು ಮೂರು ಜೀನ್ಗಳನ್ನ ಪತ್ತೆ ಹಚ್ಚುತ್ತವೆ, ಈಗಿರುವ ಕೆಲ ಟೆಸ್ಟ್ನಲ್ಲಿ ಎರಡು ಜೀನ್ಗಳನ್ನು ಮಾತ್ರ ಪತ್ತೆ ಹಚ್ಚಲಿದೆ ಅಂತ ವಿವರಿಸಿದರು. ಒಮಿಕ್ರಾನ್ನಲ್ಲಿ ಎಸ್ (S) ಜೀನ್ ಕಂಡು ಬಾರದೇ ಇದ್ದಾಗ ಸೋಂಕು ದೃಢಪಡುತ್ತದೆ. ಇದನ್ನು ಪರೋಕ್ಷವಾಗಿ ಅಂದಾಜಿಸಲಾಗುತ್ತದೆ ಅಂತ ತಿಳಿಸಿದರು.