ಬೆಂಗಳೂರು : ಒಮಿಕ್ರಾನ್ ಭೀತಿ ಹಿನ್ನೆಲೆ ಹೊಸ ವರ್ಷಾಚರಣೆಗೆ ಸರ್ಕಾರ ಅವಕಾಶ ಕೊಡಲಿದ್ಯಾ ಇಲ್ವಾ ಎಂಬ ಹತ್ತಾರು ಪ್ರಶ್ನೆಗಳು ಮೂಡುತ್ತಿವೆ. ಯಾಕೆಂದರೆ ಇತರೆ ವೈರಸ್ ಗಿಂದ ಒಮಿಕ್ರಾನ್ ಮೂರು ಪಟ್ಟು ವೇಗವಾಗಿ ಹರಡಲಿದ್ದು, ಆತಂಕ ಮೂಡಿಸಿದೆ. ಈ ಮಧ್ಯೆ ತಜ್ಞರು ಜನಸಂದಣಿಗೆ ಸೇರುವ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ಸಲಹೆ ನೀಡಿದ್ದಾರೆ.
ಹೊಸ ವರ್ಷಾಚರಣೆ, ಕ್ರಿಸ್ಮಸ್ಗೆ ಬೀಳುತ್ತಾ ಬ್ರೇಕ್..! ಹೊಸ ವರ್ಷ ಮತ್ತು ಕ್ರಿಸ್ ಮಸ್ಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿ ನಿರ್ಧಾರ ಆಗಲಿದೆ. ಇದುವರೆಗೂ ಬಿಬಿಎಂಪಿಗೆ ಆಚರಣೆಗೆ ಅನುಮತಿ ಕೋರಿ ಯಾವುದೇ ಮನವಿಗಳು ಬಂದಿಲ್ಲ. ಕೊರೊನಾದ ಈ ಪರಿಸ್ಥಿತಿಯಲ್ಲಿ ಆಚರಣೆಗೆ ಅವಕಾಶ ಕೊಡುವುದು ಬೇಡವೋ ಬೇಕೋ ಎಂದು ನಿರ್ಧಾರ ಆಗಬೇಕಿದೆ. ಸದ್ಯ ಒಮಿಕ್ರಾನ್ ಸೋಂಕು ಯಾವುದೇ ಹೊಸ ಕೇಸ್ ಇದುವರೆಗೂ ಪತ್ತೆಯಾಗಿಲ್ಲ ಎಂದರು.
ಲಸಿಕೆ ಹಂಚಿಕೆ ಪ್ರಮಾಣ ಹೆಚ್ಚಳ : ಒಮಿಕ್ರಾನ್ ಕೇಸ್ ಪತ್ತೆಯಾದ ಬಳಿಕ ಲಸಿಕೆ ಹಂಚಿಕೆ ಪ್ರಮಾಣ ಹೆಚ್ಚಳವಾಯ್ತಾ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಎರಡನೇ ಅಲೆ ಬಳಿಕ ಜನರಲ್ಲಿ ನಿರ್ಲಕ್ಷ್ಯ ಮನೋಭಾವನೆ ಮೂಡಿತ್ತು. ಆದ್ರೆ, ಒಮಿಕ್ರಾನ್ ಕೇಸ್ ಪತ್ತೆಯಾದ ಬಳಿಕ ಮತ್ತೆ ಜನರಿಗೆ ಲಸಿಕೆ ಮಹತ್ವ ಗೊತ್ತಾಗಿದೆ. ಈಗಾಗಲೇ ನಗರದಲ್ಲಿ 70% ಎರಡನೇ ಡೋಸ್ ಹಾಕಲಾಗಿದೆ ಎಂದು ಹೇಳಿದರು.
Covid testing price ಸಂಬಂಧ ಏರ್ ಪೋರ್ಟ್ನಲ್ಲಿ ಕೊರೊನಾ ಪರೀಕ್ಷೆ ದರ ದುಬಾರಿ ವಿಚಾರವಾಗಿ ಮಾತಾನಾಡಿದ ಆಯುಕ್ತರು ಬೇರೆ ರಾಜ್ಯಕ್ಕೆ ಹೋಲಿಸಿಕೊಂಡರೆ ನಮ್ಮ ರಾಜ್ಯದಲ್ಲಿ ದುಬಾರಿ ಇಲ್ಲ. ಸರ್ಕಾರವೇ ಈ ಬಗ್ಗೆ ದರ ನಿಗದಿ ಮಾಡಿದೆ ಅದೇ ಜಾರಿಯಾಗಿದೆ ಎಂದು ತಿಳಿಸಿದರು.
ಬೂಸ್ಟರ್ ಡೋಸ್ : ಒಮಿಕ್ರಾನ್ ನಿಯಂತ್ರಣಕ್ಕೆ ಬೂಸ್ಟರ್ ಡೋಸ್ ನೀಡುವ ಕುರಿತು ಪ್ರತಿಕ್ರಿಯಿಸಿದ ಅವ್ರು, ಬೂಸ್ಟರ್ ಡೋಸ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಯಾವುದೇ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ರಾಜ್ಯ ಸರ್ಕಾರದ ಪ್ರತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕೇಂದ್ರ ಸರ್ಕಾರವೇ ಈ ಬಗ್ಗೆ ಘೋಷಣೆ ಮಾಡಬೇಕು ಅಂತ ಸ್ಪಷ್ಟಪಡಿಸಿದರು.