ಬೆಂಗಳೂರು:ಮಾಲ್, ಸಿನಿಮಾ ಮಂದಿರ, ರಂಗಮಂದಿರ ಪ್ರವೇಶಕ್ಕೆ ಕೋವಿಡ್ ಲಸಿಕೆಯ ಎರಡೂ ಡೋಸ್ ಕಡ್ಡಾಯವಾಗಿದ್ದು, ಮಕ್ಕಳು ಶಾಲೆಗೆ ಹೋಗಬೇಕಾದಲ್ಲಿ ಅವರ ಪೋಷಕರಿಗೆ ಎರಡೂ ಡೋಸ್ ಕಡ್ಡಾಯ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದರಷ್ಟೇ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎನ್ನುವುದು ಸೇರಿ ಹಲವು ನಿರ್ಧಾರಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
Omicron ಮಾರ್ಗಸೂಚಿ ಬಿಡುಗಡೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಣಿತರ ಸಭೆ ನಡೆಸಲಾಯಿತು. ಸಚಿವರಾದ ಗೋವಿಂದ ಕಾರಜೋಳ, ಡಾ. ಸುಧಾಕರ್, ಡಾ. ಅಶ್ವತ್ಥ ನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ತಜ್ಞ ವೈದ್ಯರಾದ ಡಾ. ಸುದರ್ಶನ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಒಮಿಕ್ರಾನ್ ಪಾಸಿಟಿವ್ ವರದಿಗಾಗಿ ಕೇಂದ್ರ ಮನವಿ: ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ಒಮಿಕ್ರಾನ್ ಸೋಂಕು ನಿಯಂತ್ರಣ ಕುರಿತು ಸಭೆ ನಡೆಸಲಾಯಿತು. ಬೆಂಗಳೂರಿನಲ್ಲಿ ಎರಡು ಒಮಿಕ್ರಾನ್ ಪತ್ತೆಯಾಗಿರುವುದರಿಂದ ಕೊರೊನಾಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಮತ್ತು ಪರಿಣಿತರನ್ನು ಈ ಸಭೆಗೆ ಕರೆಯಲಾಗಿತ್ತು. ಬಹಳಷ್ಟು ಚರ್ಚೆ ನಡೆಸಲಾಗಿದೆ.
ನಮ್ಮಲ್ಲಿ ರೂಪಾಂತರಿ ತಳಿ ವೈರಸ್ ನ ಎರಡು ಪ್ರಕರಣ ಪತ್ತೆಯಾಗಿದೆ. ಇಡಿ ವಿಶ್ವದಲ್ಲಿ 400 ಪ್ರಕರಣ ವರದಿಯಾಗಿದೆ. ಅಧಿಕೃತವಾಗಿ ಈ ಪ್ರಕರಣದ ಕುರಿತು ಯಾವುದೇ ಅಧ್ಯಯನದ ವರದಿ ಬಂದಿಲ್ಲ. ಅನೌಪಚಾರಿಕವಾಗಿ ಈ ರೋಗ ಅಷ್ಟು ತೀವ್ರ ಪ್ರಮಾಣದಲ್ಲಿ ಇಲ್ಲ, ಸೋಂಕಿತರಿಗೆ ಎಲ್ಲವೂ ಲಘು ಲಕ್ಷಣ ಕಂಡುಬಂದಿದೆ. ಯಾವುದೇ ಸಾವಿನ ಪ್ರಕರಣ ಕಂಡು ಬಂದಿಲ್ಲ ಎಂದು ಅನೌಪಚಾರಿಕ ವರದಿ ಬಂದಿದೆ. ಹಾಗಾಗಿ ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒಮಿಕ್ರಾನ್ ಪಾಸಿಟಿವ್ ವರದಿಯ ವಿವರ ಒದಗಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.
Omicron ಮಾರ್ಗಸೂಚಿ ಬಿಡುಗಡೆ ಒಮಿಕ್ರಾನ್ ಮಾರ್ಗಸೂಚಿ : ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿ ನೆಗೆಟಿವ್ ವರದಿ ಬಂದರಷ್ಟೇ ಅವರನ್ನ ನಿಲ್ದಾಣದಿಂದ ಹೊರಗೆ ಬಿಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚು ಮಾಡಲು ಸೂಚಿಸಲಾಗಿದೆ. ಒಮಿಕ್ರಾನ್ ಜೊತೆ ಇತರ ವೈರಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಇನ್ನ ಮುಂದೆ ಸಿನಿಮಾ ಮಂದಿರಗಳು, ಮಾಲ್ಗಳು, ರಂಗಮಂದಿರಗಳಿಗೆ ಪ್ರವೇಶಿಸಲು ಕೊರೊನಾ ಲಸಿಕೆಯ ಎರಡು ಡೋಸ್ ಕಡ್ಡಾಯ ಮತ್ತು ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ 2 ಡೋಸ್ ಪಡೆದಿದ್ದರೆ ಮಾತ್ರ ಅವರ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ ಈ ಬಗ್ಗೆ ಇಂದೇ ಈ ನಿಯಮ ಕಡ್ಡಾಯಗೊಳಿಸಿ ಆದೇಶ ಮಾಡಲಿದ್ದೇವೆ ಎಂದರು.
ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಯಾವುದೇ ಸಮಾರಂಭ ಮಾಡುವಂತಿಲ್ಲ, ಕೇರಳದಿಂದ ಬಂದ ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಸಮಸ್ಯೆ ಕಾಡುತ್ತಿರುವ ಕಾರಣ ಯಾವುದೇ ಶಾಲೆಗಳಲ್ಲಿ ಯಾವುದೇ ಸಭೆ - ಸಮಾರಂಭಗಳಿಗೆ ಅವಕಾಶ ನೀಡದಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಮದುವೆ ಕಾರ್ಯಕ್ರಮಕ್ಕೆ ಗರಿಷ್ಠ ಐದುನೂರು ಜನಕ್ಕೆ ಸೀಮಿತಗೊಳಿಸಿ ಕಡ್ಡಾಯಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಆರೋಗ್ಯ ಇಲಾಖೆಗೆ ಸೂಚನೆ : ನಿತ್ಯ 60 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಅದನ್ನ ಈಗ ಒಂದು ಲಕ್ಷಕ್ಕೆ ಹೆಚ್ಚಿಸಲು ಆರೋಗ್ಯ ಇಲಾಖೆಗೆ ಸೂಚನೆ ಕೊಡಲಾಗಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕದ ಬೆಡ್, ಐಸೊಲೇಷನ್ ಬೆಡ್, ಐಸಿಯು ಬೆಡ್ಗಳನ್ನು ಹೆಚ್ಚುರಿಯಾಗಿ ವ್ಯವಸ್ಥೆ ಮಾಡಿಕೊಂಡಿತ್ತು ಈಗ ಅವುಗಳನ್ನು ಮತ್ತೆ ಮರುಚಾಲನೆಗೊಳಿಸಲು ಸೂಚಿಸಿಲಾಗಿದೆ. ಆಮ್ಲಜನಕ ಘಟಕಗಳನ್ನು ದುರಸ್ತಿಪಡಿಸಿ, ಸಿದ್ಧಗೊಳಿಸಿ, ಸಜ್ಜುಗೊಳಿಸಿ ಇರಿಸಿಕೊಳ್ಳುವಂತೆ ಸೂಚನೆ ಕೊಡಲಾಗಿದೆ. ಆಮ್ಲಜನಕ ಜಾಲ, ಸಾಗಣೆ, ಲಭ್ಯತೆ ಬಗ್ಗೆ ಈ ಹಿಂದೆ ಸಮಿತಿ ಮಾಡಲಾಗಿತ್ತು ಈಗ ಮತ್ತೆ ಆ ಸಮಿತಿಯನ್ನು ಮರುಚಾಲನೆ ಗೊಳಿಸಲಾಗುತ್ತದೆ ಎಂದರು.
ಸರ್ವೈಲನ್ಸ್ ಅಧಿಕಾರಿ ನೇಮಕ : ಇಡೀ ರಾಜ್ಯಾದ್ಯಂತ ಕೋವಿಡ್ ನಿಯಂತ್ರಣ ಕೇಂದ್ರ ನಿಂತಿತ್ತು ಅದನ್ನ ಮತ್ತೆ ಪ್ರಾರಂಭ ಮಾಡಿದ್ದೇವೆ ಬೆಂಗಳೂರಿನಲ್ಲೂ ಕೇಂದ್ರ ಆರಂಭಕ್ಕೆ ಬಿಬಿಎಂಪಿಗೆ ಸೂಚನೆ ಕೊಟ್ಟಿದ್ದು ಅದಕ್ಕೆ ಬೇಕಾದ ಸಿಬ್ಬಂದಿ ನೇಮಕಕ್ಕೂ ಅನುಮತಿ ಕೊಡಲಾಗಿದೆ. ಕಳೆದ ಬಾರಿ ಔಷಧ ಸಮಸ್ಯೆ ಆರಂಭದಲ್ಲಿಯೇ ಉಂಟಾಗಿತ್ತು ಈ ಬಾರಿ ಆ ರೀತಿಯ ಸಮಸ್ಯೆಗಳು ಆಗಬಾರದು ಎಂದು ಅಗತ್ಯ ಲಸಿಕೆ ಮತ್ತು ಔಷಧಿಯನ್ನು ಖರೀದಿ ಮಾಡಿ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ, ಇದಕ್ಕೆ ಶಿಲ್ಪಾ ನಾಗರಾಜ್ ಅವರನ್ನ ಸರ್ವೈಲನ್ಸ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ ಎಂದರು.
ಶಾಂಗ್ರಿಲಾ ಹೋಟೆಲ್ಗೆ ಬಂದಿದ್ದ ವಿದೇಶಿ ಪ್ರಜೆ ಕೊರೊನಾ ಪಾಸಿಟಿವ್ ಬಂದು ಮತ್ತು ನೆಗೆಟಿವ್ ವರದಿ ತೋರಿಸಿ ವಿದೇಶಕ್ಕೆ ಹೋಗಿದ್ದಾರೆ. ಇದರಲ್ಲಿ ಏನಾಗಿದೆ ಎಂದು ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸಲು ಸೂಚನೆ ಕೊಡಲಾಗಿದೆ. ಹೈ ಗ್ರೌಂಡ್ ಹಣೆಯಲ್ಲಿ ಪ್ರಕರಣ ದಾಖಲಿಸಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.
ಕೋವಿಡ್ ಪರೀಕ್ಷೆ ದರ ನಿಗದಿ : ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ಮಾಡಲು ಐದುನೂರು ರೂ.ಗಳ ನಿಗದಿಪಡಿಸಲಾಗಿದೆ ವಿಶೇಷ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರೆ 3000 ರೂ. ನೀಡಬೇಕಾಗಲಿದೆ.
ಇನ್ನು ಮುಂದೆ ಯಾರು ವಿಮಾನ ನಿಲ್ದಾಣ ಪ್ರವೇಶದ ಮಾಡುವುದಿದ್ದರೂ ಟಿಕೆಟ್ ಕಾಯ್ದಿರಿಸುವ ವೇಳೆಯಲ್ಲಿಯೇ ತಪಾಸಣಾ ದರವನ್ನು ಪಾವತಿ ಮಾಡಬೇಕಾಗಿದೆ ಪರೀಕ್ಷೆ ನಡೆದ ತಕ್ಷಣ ಪಾಸಿಟಿವ್ ವರದಿ ಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಇರಿಸಿಕೊಳ್ಳಲಾಗುತ್ತದೆ, ಮನೆಗೆ ಕಳುಹಿಸುವುದಿಲ್ಲ ಎಂದರು. ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಬಗ್ಗೆ ಚರ್ಚಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿ ನಿರ್ಧರಿಸೋಣ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನ: ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದೆ ಅದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ ಅದಕ್ಕೆ ಬೇಕಿರುವ ನಿಯಮಗಳನ್ನು ರೂಪಿಸಲಾಗುತ್ತದೆ. ಈಗಾಗಲೇ ಎರಡು ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ ಈಗಲೂ ನಡೆಸದೇ ಇದ್ದರೆ ಅಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಲಿದೆ ಎಂದು ಅಧಿವೇಶನ ಬೆಳಗಾವಿಯಲ್ಲಿ ನಡೆಯುವುದು ಖಚಿತ ಎಂದರು.
10 ಜನ ಮಿಸ್ಸಿಂಗ್ : ವಿದೇಶದಿಂದ ಬಂದಿರುವವರಲ್ಲಿ ಹತ್ತು ಜನ ಮಿಸ್ಸಿಂಗ್ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಇಂದು ರಾತ್ರಿಯೊಳಗೆ ಅವರು ಎಲ್ಲೇ ಇದ್ದರೂ ಅವರನ್ನು ಹುಡುಕಿ ಅವರ ಪರೀಕ್ಷೆ ನಡೆಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ ಎಂದರು. ನೂತನ ಮಾರ್ಗಸೂಚಿಯನ್ನು ಸದ್ಯದಲ್ಲೇ ಬಿಡುಗಡೆ ಮಸಡಲಾಗುತ್ತದೆ, ಸದ್ಯ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.