ಬೆಂಗಳೂರು:ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಇದೀಗ ಭಾರತದಲ್ಲಿ ದಿನದಿಂದ ದಿನಕ್ಕೆ ವೇಗವಾಗಿ ಹರಡಲು ಶುರುವಾಗಿದ್ದು, ಕರ್ನಾಟಕದಲ್ಲಿ ಇಂದು ಮತ್ತೆ ಐದು ಹೊಸ ಒಮಿಕ್ರಾನ್ ಪ್ರಕರಣ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ನಾಲ್ಕು ಹಾಗೂ ದಾವಣಗೆರೆಯಲ್ಲಿ ಒಂದು ಹೊಸ ಪ್ರಕರಣ ದಾಖಲಾಗಿದ್ದು, ಎಲ್ಲರಿಗೂ ಐಸೋಲೇಷನ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ಜೊತೆಗೆ ಇವರ ಸಂಪರ್ಕಕ್ಕೆ ಬಂದಿರುವ ಎಲ್ಲರಿಗೂ ಈಗಾಗಲೇ ಪರೀಕ್ಷೆಗೊಳಪಡಿಸಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ 566 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 6 ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ 85 ಒಮಿಕ್ರಾನ್ ಕೇಸ್
ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಪ್ರಕರಣಗಳ ಆರ್ಭಟ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ 85 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ 252ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಹೊಸದಾಗಿ 3,9000 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 20 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸದ್ಯ 14,065 ಸಕ್ರಿಯ ಪ್ರಕರಣಗಳಿವೆ.
ದೆಹಲಿಯಲ್ಲಿ ಹೊಸದಾಗಿ 73 ಒಮಿಕ್ರಾನ್ ಕೇಸ್ ದಾಖಲಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 238ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಹೊಸದಾಗಿ 923 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, ಹೆಚ್ಚು ಆತಂಕ ಮೂಡಿಸಿದೆ. ರಾಜಸ್ಥಾನದಲ್ಲಿ ಹೊಸದಾಗಿ 22 ಒಮಿಕ್ರಾನ್ ಕೇಸ್ ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿರಿ:ಮಾಸ್ಕ್ ಹಾಕದೇ ಬ್ಯಾಂಕ್ನೊಳಗೆ ನುಗ್ಗಲು ಯತ್ನ.. ಅನುಮತಿ ನಿರಾಕರಿಸಿದ ಸಿಬ್ಬಂದಿಗೆ ಥಳಿಸಿದ ವ್ಯಕ್ತಿ!
ಗುಜರಾತ್ನಲ್ಲೂ 19 ಹೊಸ ಒಮಿಕ್ರಾನ್ ಪ್ರಕರಣ ಕಾಣಿಸಿಕೊಂಡಿದ್ದು, ಸೋಂಕಿತ ಪ್ರಕರಣಗಳ ಸಂಖ್ಯೆ 97ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲೂ ಹೊಸದಾಗಿ 10 ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣ 16ಕ್ಕೆ ಏರಿಕೆಯಾಗಿದೆ.