ಬೆಂಗಳೂರು:ಟೋಕಿಯೋ ಒಲಿಂಪಿಕ್ಸ್ ಮಹಿಳಾ ಗಾಲ್ಫ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕರ್ನಾಟಕದ ಅದಿತಿ ಅಶೋಕ್‌ಗೆ ದೇಶದ ಎರಡು ಪ್ರತಿಷ್ಠಿತ ಸಂಸ್ಥೆಗಳಿಂದ ಬಹುಮಾನ ಘೋಷಣೆ ಮಾಡಲಾಗಿದೆ. ಪದಕಕ್ಕೆ ಸನಿಹ ತಲುಪಿದ್ದು ಸಾಮಾನ್ಯವಲ್ಲ ಎಂದು ಈ ಸಂಸ್ಥೆಗಳು ಅದಿತಿ ಅವರನ್ನು ಶ್ಲಾಘಿಸಿವೆ.
ಇತ್ತೀಚೆಗಷ್ಟೇ ಮುಗಿದ ಟೋಕಿಯೊ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಸ್ಪರ್ಧೆಯ ಮೊದಲ ಮೂರು ದಿನ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಗೆಲ್ಲುವತ್ತ ಮುನ್ನಡೆದಿದ್ದರು. ಫೈನಲ್‌ನ ಕೊನೇ ಕ್ಷಣದಲ್ಲಿ ಹಿನ್ನಡೆಯಾಗಿ ಅದಿತಿ 4ನೇ ಸ್ಥಾನಕ್ಕೆ ಕುಸಿದು ಪದಕವಂಚಿತೆಯಾಗಿದ್ದರು. ಈ ಅಪೂರ್ವ ಸಾಧನೆಗಾಗಿ ಈಗ ಅದಿತಿಗೆ ಭರ್ಜರಿಗೆ ಬಹುಮಾನಗಳು ಒಲಿದು ಬಂದಿವೆ. ಮ್ಯಾನ್ ಕೈಂಡ್ ಫಾರ್ಮ ಮತ್ತು ಟಾಟಾ ಸಂಸ್ಥೆ ಬಂಪರ್ ಗಿಫ್ಟ್ ಘೋಷಿಸಿದ್ದಾರೆ.
ಟಾಟಾ ಮೋಟಾರ್ಸ್‌ನಿಂದ ಕಾರ್ ಗಿಫ್ಟ್
ರಾಜಧಾನಿಯಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಅದಿತಿ ಅಶೋಕ್ ಸಹಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲಿ ಪದಕ ವಂಚಿತರಾದ ಭಾರತದ ಕ್ರೀಡಾಪಟುಗಳಿಗೆ ಆಲ್ಟ್ಜ್ ಕಾರು ಉಡುಗೊರೆ ನೀಡುವುದಾಗಿ ದೇಶದ ಅತ್ಯುತ್ತಮ ಆಟೋಮೊಬೈಲ್ ಸಂಸ್ಥೆ ಟಾಟಾ ಮೋಟಾರ್ಸ್ ಘೋಷಿಸಿದೆ. ಅದಿತಿಯೊಂದಿಗೆ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ಶೀಘ್ರದಲ್ಲೇ ಈ ಕಾರು ವಿತರಿಸುವದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ. 5.84 ಲಕ್ಷ ರೂ. ಆರಂಭಿಕ ಬೆಲೆ ಹೊಂದಿರುವ ಕಾರು ಇದಾಗಿದೆ.
ಭಾರತದ ಪಾಲಿಗೆ ಒಲಿಂಪಿಕ್ಸ್ ಸ್ಪರ್ಧೆ ಪದಕಕ್ಕಿಂತಲೂ ಮಿಗಿಲಾದುದು. ಉನ್ನತ ಮಟ್ಟದ ಸ್ಪರ್ಧೆ, ಪ್ರತಿಭೆ, ಒತ್ತಡದ ನಡುವೆಯೂ ಪದಕಕ್ಕೆ ಅತ್ಯಂತ ಸನಿಹಕ್ಕೆ ಕ್ರೀಡಾಪಟುಗಳು ತಲುಪಿದ್ದಾರೆ. ಹಲವರಿಗೆ ಪದಕ ತಪ್ಪಿರಬಹುದು. ಆದರೆ ಭಾರತೀಯರ ಹೃದಯ ಗೆದ್ದಿದ್ದಾರೆ. ಇವರ ದೃಢಸಂಕಲ್ಪ ಭಾರತದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾದುದು ಎಂದು ಟಾಟಾ ಸಂಸ್ಥೆ ತಿಳಿಸಿದೆ.
ರಾಜ್ಯದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳಿಂದ ಬಂಪರ್ ಬಹುಮಾನ - ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್
ಇತ್ತೀಚೆಗೆ ಜಪಾನ್‌ನಲ್ಲಿ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪ್ರಶಸ್ತಿಯನ್ನು ಜಯಿಸುವ ಮಟ್ಟಕ್ಕೆ ಬಂದು ಕೊನೆ ಕ್ಷಣದಲ್ಲಿ ನಿರಾಸೆ ಅಭುವಿಸಿದ್ರೂ ದೇಶದ ಕೋಟಿ ಕೋಟಿ ಜನರ ಮನ ಗೆದ್ದಿರುವ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ಗೆ ಬಹುಮಾನಗಳು ಹರಿದು ಬರುತ್ತಿವೆ. ಟಾಟಾ ಮೋಟಾರ್ಸ್ ಆಲ್ಟ್ಜ್ ಕಾರು ಉಡುಗೊರೆ ನೀಡಿದರೆ, ಮ್ಯಾನ್ ಕೈಂಡ್ ಫಾರ್ಮ ಸಂಸ್ಥೆ 11 ಲಕ್ಷ ನಗದು ಘೋಷಿಸಿದೆ.
ಇದನ್ನೂ ಓದಿ:ಹೆವಿವೇಟ್ ಬಾಕ್ಸರ್ಗಳ ಜೊತೆ ಲೈಟ್ ವೇಟ್ ಬಾಕ್ಸರ್ ಕಾದಾಡಿದಂತಿತ್ತು ನನ್ನ ಸ್ಪರ್ಧೆ: ಗಾಲ್ಫರ್ ಅದಿತಿ
ಮ್ಯಾನ್‌ಕೈಂಡ್ ಫಾರ್ಮಾ ಸಂಸ್ಥೆಯಿಂದ ನಗದು ಬಹುಮಾನ
ಮ್ಯಾನ್‌ಕೈಂಡ್ ಫಾರ್ಮಾ ಕೂಡ ತಲಾ 11 ಲಕ್ಷ ರೂ. ಬಹುಮಾನ ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಲ್ಲಿ ಪದಕ ವಂಚಿತರಾದ 20 ಕ್ರೀಡಾಪಟುಗಳಿಗೆ ನೀಡಿದೆ. ಅದಿತಿ ಅಶೋಕ್ ಸಹಿತ ಪದಕದ ಸನಿಹದಲ್ಲಿ ಎಡವಿದ ಕ್ರೀಡಾಪಟುಗಳ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮಕ್ಕಾಗಿ ಮ್ಯಾನ್‌ಕೈಂಡ್ ಫಾರ್ಮಾ ಕಂಪನಿ ಪ್ರೋತ್ಸಾಹ ತುಂಬಲು ನಿರ್ಧರಿಸಿದೆ. ಅದಿತಿ ಜತೆಗೆ ಕಂಚಿನ ಪದಕದ ಹೋರಾಟದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡದ 16 ಆಟಗಾರ್ತಿಯರು, ಕುಸ್ತಿಪಟು ದೀಪಕ್ ಪೂನಿಯಾ, ಬಾಕ್ಸರ್ ಸತೀಶ್ ಕುಮಾರ್ ಮತ್ತು ಭಾರತೀಯ ಶೂಟರ್ ಸೌರಭ್ ಚೌಧರಿಗೆ ತಲಾ 11 ಲಕ್ಷ ರೂ. ಬಹುಮಾನ ನೀಡಲಿದ್ದೇವೆ ಎಂದು ಸಂಸ್ಥೆ ಹೇಳಿದೆ.
ಪ್ರತಿ ಕ್ರೀಡೆಯಲ್ಲೂ ಗೆಲುವೊಂದೇ ಮುಖ್ಯವಾಗುವುದಿಲ್ಲ. ಕ್ರೀಡಾಪಟುಗಳ ಪ್ರಯತ್ನ ಪ್ರಮುಖವೆನಿಸುತ್ತದೆ. ದೇಶವನ್ನು ಪ್ರತಿನಿಧಿಸುವ ವೇಳೆ ನಮ್ಮ ಈ ಕ್ರೀಡಾಪಟುಗಳಲ್ಲಿ ಅಂಥ ಅತ್ಯುತ್ತಮ ಪ್ರಯತ್ನವನ್ನು ಕಂಡಿದ್ದೇವೆ. ಹಲವರು ಪದಕ ವಂಚಿತರಾಗಿರಬಹುದು. ಆದರೆ ಎಲ್ಲರ ಹೃದಯ ಗೆದ್ದಿದ್ದಾರೆ. ಪರಿಶ್ರಮ ಮತ್ತು ತ್ಯಾಗವನ್ನೂ ನಾವು ಪ್ರೋತ್ಸಾಹಿಸುತ್ತೇವೆ. ಈ ಕ್ರೀಡಾಪಟುಗಳು ಯುವ ಜನತೆ ಕ್ರೀಡೆಗೆ ಬರಲು ಪ್ರೇರಣೆಯಾಗಿದ್ದಾರೆ ಎಂದು ಮ್ಯಾನ್‌ಕೈಂಡ್ ಫಾರ್ಮಾ ಸಂಸ್ಥೆಯ ಎಂಡಿ ರಾಜೀವ್ ಜುನೇಜಾ ತಿಳಿಸಿದ್ದಾರೆ.