ಬೆಂಗಳೂರು: ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ರಾಜಕೀಯ ನಾಯಕರು ಪಾಲ್ಗೊಂಡಿದ್ದಾರೆ.
ಸ್ವಾತಂತ್ರ್ಯ ಉದ್ಯಾನದತ್ತ ಮೆರವಣಿಗೆ ತೆರಳುವ ಮುನ್ನ ಕೆಲ ನಾಯಕರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದು, ಡಿಕೆಶಿ ಪರ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಪರ ಧ್ವನಿ ಎತ್ತಿದ ರಾಜಕೀಯ ನಾಯಕರು ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಇಡಿ, ಐಟಿ ಬಳಸಿಕೊಂಡು ಬಿಜೆಪಿ ಹೇಡಿತನ ರಾಜಕೀಯ ಮಾಡುತ್ತಿದೆ. ಧೈರ್ಯ ಇದ್ದರೆ ಜನರ ಮುಂದೆ ಬರಲಿ ಎಂದು ಗುಡುಗಿದರು. ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಆದರೆ ದೇಶದಲ್ಲಿ ಕೂಡ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮಿಷ್ಟದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇಂದು ಡಿ.ಕೆ ಶಿವಕುಮಾರ್ ಮೇಲೆ ಆಗಿರುವ ದಾಳಿ ಮಾತ್ರ ಅಲ್ಲ. ನಾಳೆ ಪ್ರತಿಪಕ್ಷದ ಎಲ್ಲಾ ನಾಯಕರ ಮೇಲೂ ಇದೇ ರೀತಿ ದಾಳಿ ಮಾಡುವ ಮೂಲಕ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಬಲಪಡಿಸುತ್ತದೆ ಎಂದರು ಹರಿಹಾಯ್ದರು.
ಇನ್ನು ಉದ್ಯಮಿ ವಿಜಯ್ ಮಲ್ಯ 9 ಸಾವಿರ ಕೋಟಿ ವಂಚಿಸಿ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅದೇ ರೀತಿ ನೀರವ್ ಮೋದಿ, ಚೋಕ್ಸಿ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಆಗಿಲ್ಲವಾ? ಆದರೆ ಡಿಕೆಶಿ ಮಾತ್ರ ಕಂಡರಾ? 9 ಸಾವಿರ ಕೋಟಿ ದಾಖಲೆ ನೀಡಿದ್ದರೂ ಬಂಧಿಸಿದ್ದಾರೆ. ಸಿದ್ಧಾರ್ಥ ಸಾವು ಆತ್ಮಹತ್ಯೆ ಅಲ್ಲ, ಇಡಿ, ಐಟಿ ಬಿಟ್ಟು ಕೊಲೆ ಮಾಡಲಾಗಿದೆ ಎಂದು ಮಾಜಿ ಸಚಿವ ಗಂಭೀರ ಆರೋಪ ಮಾಡಿದ್ರು. ಇಂದು ಡಿಕೆಶಿ ಪರ ಹೋರಾಟದಲ್ಲಿ ಕೇವಲ ಒಕ್ಕಲಿಗರು ಮಾತ್ರ ಇಲ್ಲ. ಪಕ್ಷ, ಸಂಘ ಸಂಸ್ಥೆಗಳು ಪಾಲ್ಗೊಂಡಿವೆ ಎಂದು ಕೃಷ್ಣಬೈರೇಗೌಡ ಹೇಳಿದ್ರು.
ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಇಂದು ಶಾಂತಿಯುತ ಪ್ರತಿಭಟನೆಗೆ ನಿರ್ಧರಿಸಿದ್ದೀರಿ. ಎಲ್ಲರೂ ಗೌರವಯುತವಾಗಿ ನಡೆದುಕೊಳ್ಳಿ. ಡಿಕೆಶಿ ಕಷ್ಟಪಟ್ಟು ಬೆಳೆದವರು. ಕಾನೂನು ಬಾಹಿರ ಚಟುವಟಿಕೆಯಿಂದ ಹಣ ಗಳಿಸಿಲ್ಲ. ಅವರು ತನಿಖೆಗೆ ಸಂಪೂರ್ಣ ಸ್ಪಂದಿಸುತ್ತಿದ್ದರೂ, ರಾಜಕೀಯ ಪ್ರೇರಿತ ಬಂಧನವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಕಾನೂನು ರೀತಿ ತನಿಖೆಗೆ ನಮ್ಮ ಸಹಕಾರ ಇರಲಿದೆ ಎಂದರು.
ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸರಿದಾರಿಗೆ ತರಲು ಒಕ್ಕಲಿಗ ಸಮುದಾಯ ಮುಂದಾಗಿರುವುದು ಸ್ವಾಗತಾರ್ಹ. ಒಕ್ಕಲಿಗ ಒಂದು ಸಮುದಾಯವಲ್ಲ. ಕೃಷಿ ಮಾಡುವವರೆಲ್ಲಾ ಒಕ್ಕಲಿಗರು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮೋದಿ, ಅಮಿತ್ ಶಾ ಇದನ್ನು ತಂದಿದ್ದು, ರಾಜಕೀಯ ವೈರಿಗಳನ್ನು ಹಣಿಯುತ್ತಿದ್ದಾರೆ. ಬಿಜೆಪಿ ರಾಜ್ಯ ನಾಯಕರ ಆಸ್ತಿ ಹೆಚ್ಚಾಗಿದೆ. ತನಿಖೆ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿವೋರ್ವರಿಂದ ಎಲ್ಲಾ ರಾಜಕಾರಣಿಗಳ ಆಸ್ತಿ ತನಿಖೆ ಆಗಲಿ, ಅದಕ್ಕೆ ನಾವೂ ಸಿದ್ಧ ಎಂದರು.
ರಾಮಲಿಂಗರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಮೂರು ವರ್ಷದಿಂದ ಡಿಕೆಶಿ ವಿರುದ್ಧ ದ್ವೇಷ ಸಾಧಿಸುತ್ತಿದೆ. ರಾಜಕೀಯವಾಗಿ ತುಳಿಯುವ ಕಾರ್ಯ ಮಾಡುತ್ತಿದೆ. ಸ್ವಾಯತ್ತ ತನಿಖಾ ಸಂಸ್ಥೆಗಳು ತಮ್ಮ ಕಾರ್ಯವನ್ನು ಕಳೆದ ಐದು ವರ್ಷಗಳಿಂದ ಬದಲಿಸಿಕೊಂಡಿವೆ. ಪ್ರತಿಪಕ್ಷದ ವಿರುದ್ಧ ಷಡ್ಯಂತ್ರ ರೂಪಿಸುತ್ತಿವೆ. ಇದು ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯ. ನಾವೆಲ್ಲಾ ಒಂದಾಗಿ ಇರೋಣ ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರ ಸರ್ಕಾರದ ದಬ್ಬಾಳಿಕೆಯ ರಾಜಕಾರಣವನ್ನು ಜನ ಹೇಗೆ ವಿರೋಧಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಬೆದರಿಕೆ, ಒತ್ತಡ, ತೊಂದರೆ, ಸಮಸ್ಯೆ ತಂದಿಡುವ ಕಾರ್ಯವನ್ನು ತನಿಖಾ ಸಂಸ್ಥೆ ಮೂಲಕ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದ್ವೇಷದ ರಾಜಕಾರಣಕ್ಕೆ ತನಿಖಾ ಸಂಸ್ಥೆಯನ್ನು ಬಳಸಲಾಗುತ್ತಿದೆ. ಪಕ್ಷಪಾತ ಧೋರಣೆ, ಸೇಡು ತೀರಿಸಿಕೊಳ್ಳುವ ಸಂಚು ರೂಪಿಸಿದರೆ ನಾವು ಸುಮ್ಮನಿರಲು ಸಾಧ್ಯವೇ? ಹೋರಾಟ ಮಾಡಲೇಬೇಕಿದೆ. ಅದನ್ನೇ ಮಾಡುತ್ತಿದ್ದೇವೆ. ಮೋದಿ ದೇಶದ ಉದ್ಧಾರ ಮಾಡುವ ಕೆಲಸ ಮಾಡಲಿ. ತನಿಖೆಗೆ ಶಿವಕುಮಾರ್ ಸಹಕರಿಸಿದ್ದಾರೆ. ಡಿಕೆಶಿ ಎದುರಿಸುವ ವ್ಯಕ್ತಿ, ಓಡಿ ಹೋಗುವವರಲ್ಲ. ಶಿವಕುಮಾರ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. 32 ಸಾವಿರ ಕೋಟಿ ಹಣವನ್ನು ಕಳೆದ ಮೂರು ತಿಂಗಳಲ್ಲಿ ಲೂಟಿ ಆಗುತ್ತಿದೆ. ಅದನ್ನು ತಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ನಿಜವಾಗಿ ಭ್ರಷ್ಟಾಚಾರ ನಿಗ್ರಹ ಆಗುತ್ತಿಲ್ಲ. ನಿಜವಾದ ಸುದ್ದಿಯ ಚರ್ಚೆ ಆಗಬೇಕು. ಬಿಜೆಪಿ ಸೇರುವ ಪ್ರತಿಪಕ್ಷದವರಿಗೆ ತಕ್ಷಣ ಕ್ಷಮೆ ಸಿಗುತ್ತಿದೆ. ಪ್ರತಿಪಕ್ಷ ಮಣಿಸುವ ಕಾರ್ಯ ಮಾಡಿದರೆ ಅದು ದೇಶಕ್ಕೆ ಆತಂಕ. ಜನ ಎಚ್ಚೆತ್ತಿದ್ದಾರೆ. ಡಿಕೆಶಿ ಜತೆ ನಾವು ಸದಾ ಇರುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ರು.