ಕರ್ನಾಟಕ

karnataka

ETV Bharat / city

ಸಾರ್ವಜನಿಕರ ದೂರು-ದುಮ್ಮಾನಕ್ಕೆ ಸಿಗದ ನೆರವು: ಸಹಾಯಕ್ಕೆ ಬಾರದ ‘ಸಹಾಯ 2.0’ - Bangalore city news

ವಿವಿಧ ಸಮಸ್ಯೆಗಳನ್ನು ಕಚೇರಿಗೆ ಹೊತ್ತು ತರುತ್ತಿರುವ ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸುವ ಬದಲಿಗೆ ಕೊರೊನಾ ವೈರಸ್ ನೆಪ ಹೇಳಿ ವಾಪಸ್​ ಕಳುಹಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಭಾರಿ ಆಕ್ರೋಶಕ್ಕೆ ಒಳಗಾಗಿದ್ದಾರೆ.

Officials do not respond to public issues
ದೂರು-ದುಮ್ಮಾನ ಸಿಗದ ನೆರವು:

By

Published : Aug 27, 2020, 11:01 PM IST

ಬೆಂಗಳೂರು: ಕೊರೊನಾ ವೈರಸ್​ ರಾಜ್ಯಕ್ಕೆ ಕಾಲಿಟ್ಟಿದ್ದೇ ತಡ ಬೀದಿ ಬದಿ ವ್ಯಾಪಾರಿ, ರೈತ, ಬಡವರ ಮೇಲೆ ಗದಾಪ್ರಹಾರ ನಡೆಸಿದೆ. ಮತ್ತೊಂದೆಡೆ, ಸಾರ್ವಜನಿಕರು ಸಲ್ಲಿಸಿರುವ ದೂರು ದುಮ್ಮಾನಗಳಿಗೆ ಪರಿಹಾರ ನೀಡುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ಇಷ್ಟಕ್ಕೂ ಜನರ ಬಳಿ ಅಧಿಕಾರಿಗಳು ಹೇಳುತ್ತಿರುವುದೇನು?. ಇಲ್ಲಿದೆ ಅವೆಲ್ಲವುಗಳ ಸಂಪೂರ್ಣ ವಿವರ.

ಜನ ಏನೇ ಸಮಸ್ಯೆ ಹೇಳಿದರೂ ನಾವೀಗ ಕೋವಿಡ್ ಬ್ಯುಸಿಯಲ್ಲಿದ್ದೇವೆ ಎಂಬುದೊಂದೇ ಅಧಿಕಾರಿಗಳಿಂದ ಸಿಗುತ್ತಿರುವ ಉತ್ತರ. ರಾಜಧಾನಿ ಬೆಂಗಳೂರಿನಲ್ಲಿ ಜನರ ದೂರುಗಳಿಗೆ ಅಧಿಕಾರಿ ವರ್ಗ ಕ್ಯಾರೇ ಎನ್ನುತ್ತಿಲ್ಲ ಎನ್ನಲಾಗ್ತಿದೆ. ಬೆಂಗಳೂರು, ಹಾಸನ, ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳು ಇದರಿಂದ ಹೊರತಾಗೇನಿಲ್ಲ.

ಕೊರೊನಾ ಕಾರಣ ಬೆಂಗಳೂರು ಬಿಬಿಎಂಪಿ ಕಚೇರಿಗೆ ಸಾರ್ವಜನಿಕರ ನಿರ್ಬಂಧ ಹೇರಿತ್ತು. ಸಹಾಯ 2.0 ಮೂಲಕ ಜನರು ತಮ್ಮ ದೂರುಗಳನ್ನು ನೀಡಿ ಎಂದು ಹೇಳಿತ್ತು. ಬೀಳುವ ಹಂತದ ಮರಗಳ ತೆರವು, ಅರ್ಧಕ್ಕೆ ನಿಂತಿರುವ ಕಾಮಗಾರಿಗಳು, ಬಾಯ್ತೆರದ ಮ್ಯಾನ್ ಹೋಲ್​​ಗಳು, ಗುಂಡಿಮಯ ರಸ್ತೆಗಳು, ಕಸದ ಸಮಸ್ಯೆ...ಹೀಗೆ ಸಾವಿರಾರು ದೂರುಗಳು ಈಗಾಗಲೇ ದಾಖಲಾಗಿವೆ. ಆದರೆ, ಎಷ್ಟೋ ಸಮಸ್ಯೆಗಳು ಈವರೆಗೂ ಬಗೆಹರಿದಿಲ್ಲ ಎನ್ನಲಾಗ್ತಿದೆ.

ಹಣಕಾಸಿನ ಸಮಸ್ಯೆಯೋ, ಕಾರ್ಮಿಕರ ಕೊರತೆಯೋ ಅಥವಾ ಅಧಿಕಾರಿಗಳಿಗೆ ಕೆಲಸದ ಒತ್ತಡವೋ ಗೊತ್ತಿಲ್ಲ. ಹೀಗೆ ನಾನಾ ಕಾರಣ ನೀಡಿ ಮೂಲಸೌಕರ್ಯ ನೀಡುವಲ್ಲಿ ಬಿಬಿಎಂಪಿ ಎಡವುತ್ತಿದೆ. ಪಾಲಿಕೆಯ ನೀಡಿರುವ ಮಾಹಿತಿ ಪ್ರಕಾರ ಫೆಬ್ರವರಿ 8 ರಿಂದ ಆಗಸ್ಟ್ 21ರವರೆಗೆ ಆ್ಯಪ್​ನಲ್ಲಿ ಒಟ್ಟು 50,586 ದೂರುಗಳು ದಾಖಲಾಗಿದ್ದು, ಅದರಲ್ಲಿ 45,627 ಸಮಸ್ಯೆಗಳು ಬಗೆಹರಿದಿವೆ. 38,783 ಸಂಪೂರ್ಣ ಬಗೆಹರಿದಿದ್ದು, ಬಾಕಿ ಉಳಿದಿರುವ ದೂರುಗಳ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.

ಜನರ ಸಮಸ್ಯೆಗಳಿಗೆ ಸಿಗದ ಪರಿಹಾರ

ಹಾಸನದಲ್ಲಿ ಕೋವಿಡ್‌ಗೂ ಮುನ್ನ ಸರಾಗವಾಗಿ ನಡೆಯುತ್ತಿದ್ದ ಜನರ ಮತ್ತು ರೈತರ ಕೆಲಸಗಳು, ಈಗ ವಾರಗಟ್ಟಲೆ ಅಲೆದಾಡಿದರೂ ಆಗುತ್ತಿಲ್ಲ. ಪಹಣಿ ಅಥವಾ ಜಮೀನಿನ ಪತ್ರ, ಬಿತ್ತನೆ ಬೀಜ ಪಡೆಯಲು ಕಚೇರಿಗೆ ಬರುವ ರೈತರ ಪಾಡು ಹೇಳ ತೀರದಾಗಿದೆ. ಕಚೇರಿಗೆ ಬಂದರೆ ಕೆಲ ನೌಕರರು ಹೋಂ​​ ಕ್ವಾರಂಟೈನ್​​​ನಲ್ಲಿದ್ದಾರೆ. ಮಾಸ್ಕ್ ಧರಿಸಿಲ್ಲ ಎಂದು ನೆಪ ಹೇಳುವ ಅಧಿಕಾರಿಗಳು ವಾಪಸ್​​ ಕಳುಹಿಸುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸಾರ್ವಜನಿಕರು ತಮ್ಮ ದೂರು ಸ್ವೀಕರಿಸುವುದಕ್ಕೆ ರಾಯಚೂರು ಜಿಲ್ಲಾಡಳಿತ ಪ್ರತ್ಯೇಕ ಕೌಂಟರ್‌ಗಳನ್ನ ಆರಂಭಿಸಿದ್ದು, ಅವಶ್ಯ ಇರುವ ಸಿಬ್ಬಂದಿ ನಿಯೋಜಿಸಲಾಗಿದೆ.

ಸಮಸ್ಯೆಗಳ ಪರಿಹಾರಕ್ಕಾಗಿ ಗಂಟೆಗಟ್ಟಲೆ ಕಚೇರಿಗಳ ಮುಂದೆ ನಿಲ್ಲುವ ಮತ್ತು ಆನ್​ಲೈನ್​ ಮೂಲಕ ಸಲ್ಲಿಸಿರುವ ದೂರುಗಳನ್ನು ಸಕಾಲಕ್ಕೆ ವಿಲೇವಾರಿ ಮಾಡಬೇಕು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ.

ABOUT THE AUTHOR

...view details