ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷರ ಅಧಿಕೃತ ಪದಗ್ರಹಣ ಸಮಾರಂಭದ ಮಧ್ಯದಲ್ಲೇ ಊಟ ನೀಡಿಕೆ ಆರಂಭಿಸಿದ ಹಿನ್ನೆಲೆ ಕಾರ್ಯಕ್ರಮ ಮರೆತ ಕಾರ್ಯಕರ್ತರು ಊಟಕ್ಕಾಗಿ ಮುಗಿಬಿದ್ದರು.
ನಗರದ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರಾಮಲಿಂಗಾರೆಡ್ಡಿ ಹಾಗೂ ದೃವನಾರಾಯಣ್ ಅಧಿಕೃತ ಪದಗ್ರಹಣ ಸಮಾರಂಭವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿತ್ತು. ಬೆಳಗ್ಗೆ 10.45ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ 11.30ಕ್ಕೆ ಆರಂಭವಾಯಿತು. ಮಧ್ಯಾಹ್ನ 1.30ರವರೆಗೂ ಕೇವಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡಿ ಮುಗಿಸಿದ್ದರು.
ಚೌಡಯ್ಯ ಸ್ಮಾರಕ ಭವನದ ಒಳಗೆ ಸ್ಥಳವಕಾಶ ಕೊರತೆ ಹಿನ್ನೆಲೆ ಎರಡು ಬೃಹತ್ ಡಿಜಿಟಲ್ ಡಿಸ್ಪ್ಲೇ ಅಳವಡಿಸಲಾಗಿತ್ತು. ಅಲ್ಲಿ ನೂರಾರು ಕಾರ್ಯಕರ್ತರು ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದೇ ಸಂದರ್ಭ ಊಟ ನೀಡಿಕೆ ಸಭಾಂಗಣದ ಹೊರಭಾಗದಲ್ಲಿ ಆರಂಭವಾಗುತ್ತಿದ್ದಂತೆ ಅಲ್ಲಿ ಕುಳಿತಿದ್ದ ಕಾರ್ಯಕರ್ತರು ಒಮ್ಮೆಲೇ ಊಟಕ್ಕಾಗಿ ಮುಗಿಬಿದ್ದರು.