ಬೆಂಗಳೂರು : ಸಭಾಧ್ಯಕ್ಷರು ಸುಮಾರು 10 ನಿಮಿಷಗಳ ಕಾಲ ಕಾದರೂ ಸಹ ಹಾನಗಲ್ ಕ್ಷೇತ್ರ ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕ ಶ್ರೀನಿವಾಸ್ ಮಾನೆ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು ಎಂದು ವಿಧಾನಸಭೆ ಸಚಿವಾಲಯ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಿಂದ ಆಯ್ಕೆಯಾದ ಭೂಸನೂರು ರಮೇಶ್ ಬಾಳಪ್ಪ ಮತ್ತು ಹಾನಗಲ್ ಕ್ಷೇತ್ರದಿಂದ ಆಯ್ಕೆಯಾದ ಮಾನೆ ಶ್ರೀನಿವಾಸ್ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ನಿನ್ನೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬೆಳಗ್ಗೆ 10.45ರೊಳಗೆ ಆಗಮಿಸುವಂತೆ ಇಬ್ಬರು ಶಾಸಕರಿಗೂ ತಿಳಿಸಲಾಗಿತ್ತು. ಅದರಂತೆ, ಭೂಸನೂರು ರಮೇಶ್ ಬಾಳಪ್ಪ ಮತ್ತು ಮಾನೆ ಶ್ರೀನಿವಾಸ್ ಅವರು ಆಗಮಿಸಿದ್ದರು.
ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ ನಂತರ ಮಾನೆ ಶ್ರೀನಿವಾಸ್ ಅವರು ಸಭಾಧ್ಯಕ್ಷರೊಂದಿಗೆ ಮಾತನಾಡಿ ಎರಡು ನಿಮಿಷ ಹೊರ ಹೋಗಿ ಬರುವುದಾಗಿ ಕೋರಿದರು. ಆಗ ಸಭಾಧ್ಯಕ್ಷರು ಕಾರ್ಯಕ್ರಮ ಮುಗಿಸಿಕೊಂಡು ಹೋಗಲು ತಿಳಿಸಿದರು. ಆದಾಗ್ಯೂ, ಮಾನೆ ಶ್ರೀನಿವಾಸ ಅವರು ಆ ಸ್ಥಳದಿಂದ ನಿರ್ಗಮಿಸಿದರು.