ಬೆಂಗಳೂರು: ಸಿಇಟಿ ಸೇರಿ ಇತರೆ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ, ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರಾಜಭವನದ ಮುಂದೆ ಪಿಪಿಇ ಕಿಟ್ ಧರಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳ ಜೀವ ಉಳಿಸಿ, ಕೊರೊನಾ ಸಂದರ್ಭದಲ್ಲಿ ಪರೀಕ್ಷೆ ಬೇಡವೆಂದು ಆಗ್ರಹಿಸಿದರು. ಕೊರೊನಾ ಹೆಲ್ಮೆಟ್ ಧರಿಸಿ ಅಣಕು ಪ್ರದರ್ಶನ ನಡೆಸಿದರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಪಿಪಿಇ ಕಿಟ್ ಧರಿಸಿ ಎನ್ಎಸ್ಯುಐಯಿಂದ ರಾಜಭವನದ ಮುಂದೆ ಪ್ರತಿಭಟನೆ ಸಿಇಟಿ, ವಿಟಿಯು ಅಂತಿಮ ಪರೀಕ್ಷೆ ಮುಂದೂಡಿ. ಹಿಂದಿನ ಸೆಮಿಸ್ಟರ್ ಮಾರ್ಕ್ ಆಧಾರದ ಮೇಲೆ ಅವಕಾಶ ನೀಡಿ. ಸಚಿವರನ್ನು ಭೇಟಿ ಮಾಡುವುದಕ್ಕೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಪರೀಕ್ಷೆಗಳನ್ನೂ ಮುಂದೂಡಬೇಕು. ವಿದ್ಯಾರ್ಥಿಗಳ ಭವಿಷ್ಯ, ಜೀವದ ಜೊತೆ ಚೆಲ್ಲಾಟ ಆಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರೊಂದಿಗೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿದರು. ಪ್ರತಿಭಟನೆ ಮಾಡಬಾರದು ಎಂದು ಮೊದಲು ಪೊಲೀಸರು ಮನವಿ ಮಾಡಿದರು. ಪೊಲೀಸರು ಲಾಠಿ ತೆಗೆಯುತ್ತಿದ್ದಂತೆ ಪ್ರತಿಭಟನಾನಿರತ ಕಾರ್ಯಕರ್ತರು ಕಾಲ್ಕಿತ್ತರು. ಪ್ರತಿಭಟನೆ ಮುಂದುವರಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.