ಬೆಂಗಳೂರು: ನೂತನ ವಿಶ್ವವಿದ್ಯಾಲಯ ನೃಪತುಂಗ ವಿಶ್ವವಿದ್ಯಾಲಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ಸಜ್ಜಾಗುತ್ತಿದೆ. ಕಳೆದ ವರ್ಷವಷ್ಟೇ ಸ್ಥಾಪಿತಗೊಂಡಿರುವ ವಿವಿ, ಅಕ್ಟೋಬರ್ 1ರಿಂದ ಪ್ರಾರಂಭವಾಗುವ ಪ್ರಥಮ ವರ್ಷದ ಪದವಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ಎಸ್.ಬಳ್ಳಿ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಇದುವರೆಗೆ ಇದ್ದ 3 ವರ್ಷದ ಮೂಲ ಪದವಿಯ ಶಿಕ್ಷಣ ಮುಂದುವರಿಯಲಿದ್ದು, ಇದರ ಜೊತೆಗೆ 4 ವರ್ಷದ ಆನರ್ಸ್ ಪದವಿ ಕೂಡ ಪ್ರಾರಂಭವಾಗಲಿದೆ. ಮೂಲತಃ ಸರ್ಕಾರಿ ವಿಜ್ಞಾನದ ಕಾಲೇಜಾಗಿದ್ದ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಸದ್ಯಕ್ಕೆ ಬಿಎಸ್‌ಸಿ ಮತ್ತು ಬಿಸಿಎ ಪದವಿಗಳನ್ನು ನೂತನ ನೀತಿಗೆ ಅನುಗುಣವಾಗಿ ರಚಿಸಲಾಗಿದೆ. ಇನ್ನೂ 3 ವರ್ಷಗಳ ಕಾಲ ಈಗಿರುವ 7 ವಿಷಯಗಳಲ್ಲಿ ಎಂಎಸ್ಸಿ ಮುಂದುವರಿಯಲಿದೆ.
ನೂತನ ವಿಶ್ವವಿದ್ಯಾಲಯದಲ್ಲಿ 8 ಸ್ಕೂಲ್‌ಗಳನ್ನು ಆರಂಭಿಸಲಾಗಿದೆ. ಈ ಸ್ಕೂಲ್‌ಗಳಲ್ಲಿ ಪ್ರತಿಯೊಂದರಲ್ಲಿ 2 ಅಥವಾ ಹೆಚ್ಚು ವಿಭಾಗಗಳಿರುತ್ತವೆ.
1. ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್
2. ಸ್ಕೂಲ್ ಆಫ್ ಕೆಮಿಕಲ್ ಸೈನ್ಸಸ್
3. ಸ್ಕೂಲ್ ಆಫ್ ಲೈಫ್ ಸೈನ್ಸಸ್
4. ಸ್ಕೂಲ್ ಆಫ್ ಅಪ್ಲೈಡ್ ಲೈಫ್ ಸೈನ್ಸಸ್
5. ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸಸ್ & ಎಲೆಕ್ಟ್ರಾನಿಕ್ಸ್
6. ಸ್ಕೂಲ್ ಆಫ್ ಮ್ಯಾಥಮಿಟಿಕ್ಸ್ ಅಂಡ್ ಸ್ಟ್ಯಾಟಿಸ್ಟಿಕ್ಸ್
7. ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಅಂಡ್ ಲಿಟರೇಚರ್
8. ಸ್ಕೂಲ್ ಆಫ್ ಮಲ್ಟಿ ಡಿಸಿಪ್ಲಿನರಿ ಅಂಡ್ ಟ್ರಾನ್ಸ್ ಡಿಸಿಪ್ಲಿನರಿ ಸ್ಟಡೀಸ್
ಉದಾಹರಣೆಗೆ, ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗಗಳಿದ್ದು, ಒಟ್ಟು 7 ಸ್ಕೂಲ್‌ಗಳಲ್ಲಿ 14 ವಿಭಾಗಲ್ಲಿದ್ದು ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು, ತಮಿಳು, ತೆಲುಗು ಭಾಷೆಗಳು ಸೇರಿ ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಆಂಡ್ ಲಿಟರೇಚರ್ ಆಗುತ್ತದೆ. ಸ್ಕೂಲ್ ಆಫ್ ಮಲ್ಟಿ ಡಿಸಿಪ್ಲಿನರಿ ಸ್ಟಡೀಸ್ ನಲ್ಲಿ ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಇತರ ವಿಷಯಗಳು ಇರಲಿವೆ.
ಮುಂದಿನ ದಿನಗಳಲ್ಲಿ ಫಿಜಿಕಲ್ ಎಜುಕೇಶನ್ ಮತ್ತು ಲೈಬ್ರರಿ ಸೈನ್ಸ್‌ಗಳನ್ನು ಸಹ ಸ್ಕೂಲ್‌ಗಳಲ್ಲಿ ಸೇರಿಸಲಾಗುವುದು. ಉನ್ನತ ಶಿಕ್ಷಣ ಪರಿಷತ್ ಶಿಫಾರಸ್ಸು ಮಾಡಿರುವ 13 ನಮೂನೆಗಳಲ್ಲಿ ಬಿಸಿಎ ಶಿಕ್ಷಣದ IC ನಮೂನೆಯನ್ನು ಯಥಾವತ್ತಾಗಿ ಜಾರಿಗೊಳಿಸಲಾಗುತ್ತಿದೆ. ಆದರೆ ಬಿಎಸ್ಸಿ ಶಿಕ್ಷಣಕ್ಕೆ ಸಾಕಷ್ಟು ಚರ್ಚೆ, ತರ್ಕ ಮಾಡಿದ ನಂತರ III A ನಮೂನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.