ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಸಮರದ ನಡುವೆಯೇ ರಾಜ್ಯಸಭೆಯಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ನ.25 (ಸೋಮವಾರ) ಅಧಿಸೂಚನೆ ಪ್ರಕಟವಾಗಲಿದೆ.
ನ.25 ರಂದು ರಾಜ್ಯಸಭೆ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟ ನ.25ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಹ ಆರಂಭವಾಗಲಿದೆ. ರಾಜ್ಯಸಭೆ ಸದಸ್ಯರಾಗಿದ್ದ ಕೆ.ಸಿ ರಾಮಮೂರ್ತಿ ಅವರ ರಾಜೀನಾಮೆಯಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ವಿಧಾನಸಭೆಯಲ್ಲಿ ಪ್ರಸ್ತುತ ಇರುವ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಸೇರಿದಂತೆ 207 ಸದಸ್ಯರಿದ್ದಾರೆ. ಆಡಳಿತಪಕ್ಷ ಬಿಜೆಪಿ 104, ಪ್ರತಿಪಕ್ಷ ಕಾಂಗ್ರೆಸ್ 66, ಜೆಡಿಎಸ್ 34, ಬಿಎಸ್ಪಿ 1, ಪಕ್ಷೇತರರು 1 ಹಾಗೂ ಸಭಾಧ್ಯಕ್ಷರು ಸೇರಿದಂತೆ 207 ಸದಸ್ಯ ಬಲವನ್ನು ವಿಧಾನಸಭೆ ಹೊಂದಿದೆ.
ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿರುವುದರಿಂದ ಯಾವುದೇ ಅಭ್ಯರ್ಥಿ ಗೆಲ್ಲಲು ಕನಿಷ್ಠ 104 ಸದಸ್ಯರ ಮತವನ್ನು ಪಡೆಯಬೇಕಾಗುತ್ತದೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದ್ದರೂ ಇನ್ನೂ ಯಾವುದೇ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ 15 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತಲ್ಲೀನರಾಗಿದ್ದು, ಅಧಿಸೂಚನೆ ಹೊರಬಿದ್ದ ನಂತರ ರಾಜ್ಯಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆಗೆ ಚಾಲನೆ ಸಿಗಲಿದೆ.
ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಡಿ.12 ರಂದು ಮತದಾನ ನಡೆಯಲಿದೆ. ಅಂದೇ ಮತ ಎಣಿಕೆಯೂ ನಡೆದು, ಫಲಿತಾಂಶ ಹೊರ ಬೀಳಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನ.25 ರಿಂದ ಆರಂಭವಾಗಲಿದ್ದು, ಡಿಸೆಂಬರ್ 2 ರವರೆಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶವಿದೆ. ಡಿ.3 ರಂದು ನಾಮಪತ್ರ ಪರಿಶೀಲನೆ ಹಾಗೂ ಡಿ. 5 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಈಗಾಗಲೇ ರಾಜ್ಯಸಭೆ ಉಪಚುನಾವಣೆ ವೇಳಾ ಪಟ್ಟಿ ಪ್ರಕಟವಾಗಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಕಣಕ್ಕಿಳಿಯುವ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.
ವಿಧಾನಸಭೆ ಉಪಚುನಾವಣೆಯಲ್ಲಿ ಮೈತ್ರಿ ಕೈಬಿಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಸ್ಪರ್ಧೆ ನಡೆಸುತ್ತಿವೆ. ರಾಜ್ಯಸಭೆ ಉಪಚುನಾವಣೆಯಲ್ಲಿ ಇದೇ ಮಾರ್ಗವನ್ನು ಜೆಡಿಎಸ್- ಕಾಂಗ್ರೆಸ್ ಅನುಸರಿಸಿದರೆ ಬಿಜೆಪಿಯ ಮಾರ್ಗ ಸುಲಭವಾಗಲಿದೆ. ಒಂದು ವೇಳೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಕ್ಷೇತ್ರಗಳನ್ನು ಗೆದ್ದು, ರಾಜ್ಯಸಭೆ ಉಪಚುನಾವಣೆಯಲ್ಲಿ ಆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಕಷ್ಟವಾಗಬಹುದು. ಮೂರು ಪಕ್ಷಗಳು ರಾಜ್ಯ ಉಪಚುನಾವಣೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದರಿಂದ ರಾಜ್ಯಸಭೆ ಉಪಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.