ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ಡಾ. ಯು. ಅರಬಿ ಎಂಬವರನ್ನು ಸೇವೆಯಿಂದ ವಜಾಗೊಳಿಸುವ ಕುರಿತಂತೆ ಜಾರಿ ಮಾಡಿದ್ದ ಶೋಕಾಸ್ ನೋಟಿಸ್ ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.
ಮಂಗಳೂರು ವಿವಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಡಾ. ಯು. ಅರಬಿ ವಿರುದ್ಧ ವಿದ್ಯಾರ್ಥಿನಿ ಲೈಂಗಿಕ ಕಿರಕುಳದ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬಿ ಉತ್ತರಿಸಿದ್ದರೂ, ತೃಪ್ತಿಯಾಗದ ವಿವಿ ‘ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯ್ದೆ ಅಡಿ ವಿಚಾರಣೆ ನಡೆಸಲು ಆಂತರಿಕ ದೂರುಗಳ ಸಮಿತಿ ರಚಿಸಿತ್ತು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಸಮಿತಿ, ಅರಬಿ ಅವರನ್ನು ಪ್ರಕರಣದಲ್ಲಿ ದೋಷಿ ಎಂದು ತಿಳಿಸಿತ್ತು. ಇದನ್ನು ಒಪ್ಪಿದ್ದ ವಿವಿಯ ಸಿಂಡಿಕೇಟ್, ಅರಬಿ ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಹಾಗೆಯೇ, ಆರೋಪಿ ಪ್ರಾಧ್ಯಾಪಕರನ್ನು ಅಮಾನತ್ತಿನಲ್ಲಿಟ್ಟು, ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆಗೆ ವಿವರಣೆ ಕೇಳಿ ಎರಡನೇ ಶೋಕಾಸ್ ನೋಟಿಸ್ ನೀಡಿತ್ತು. ಆ ಬಳಿಕ ಡಾ. ಅರಬಿ ಎರಡನೇ ಶೋಕಾಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸೇವಾ ನಿಯಮಗಳಡಿ ಯಾವುದೇ ವಿಚಾರಣೆ ನಡೆಸದೆ ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆ ಅಂಗೀಕರಿಸಿರುವುದು ನಿಯಮಬಾಹಿರ ಎಂದು ಅರಬಿ ದೂರಿದ್ದರು.