ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ (ಇಡಿ) ತಮಗೆ ಸಮನ್ಸ್ ಬಂದಿದೆ ಎಂದು ಶಾಸಕ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ನನಗೆ ಇಡಿಯಿಂದ ಸಮನ್ಸ್ ಬಂದಿದೆ: ಜಾರ್ಜ್ ಸ್ಪಷ್ಟನೆ - ಕಾನೂನಿನ ಮೇಲೆ ನಂಬಿಕೆ
ಜಾರಿ ನಿರ್ದೇಶನಾಲಯದಿಂದ 'ನನಗೆ ಸಮನ್ಸ್ ಬಂದಿದೆ' ಎಂದು ಶಾಸಕ ಕೆ.ಜೆ.ಜಾರ್ಜ್ ದೃಢಪಡಿಸಿದ್ದಾರೆ. ಟ್ವೀಟ್ ಮೂಲಕ ಮಾಹಿತಿ ನೀಡಿದ ಮಾಜಿ ಸಚಿವರು.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಮಗೆ 2019ರ ಡಿಸೆಂಬರ್ 23ರಂದು ಇಡಿಯಿಂದ ಬಂದಿರುವ ಸಮನ್ಸ್ ಅನ್ನು ಸ್ವೀಕರಿಸಿದ್ದೇನೆ. ಯಾವುದೇ ಪ್ರಶ್ನೆಗಳು ಅಥವಾ ವಿವರಣೆಗಾಗಿ ಅಧಿಕಾರಿಗಳೊಂದಿಗೆ ಸಹಕರಿಸುವುದು ನಾಗರಿಕನಾಗಿ ನನ್ನ ಕರ್ತವ್ಯ. ನಾನು ಕಾನೂನು ಪಾಲಿಸುವ ನಾಗರಿಕ. ನಮ್ಮ ಎಲ್ಲಾ ಆಸ್ತಿ, ಸಂಪತ್ತನ್ನು ಕಾನೂನುಬದ್ಧವಾಗಿ ಘೋಷಿಸಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.
ಕಾನೂನು ಮತ್ತು ತನಿಖಾ ಸಂಸ್ಥೆಯಲ್ಲಿ ನನಗೆ ಅಪಾರ ನಂಬಿಕೆ ಇದೆ. ನನ್ನ ಕುಟುಂಬ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದಿದ್ದಾರೆ. ಜಾರ್ಜ್ ಅವರ ಆಪ್ತ ಸಹಾಯಕರು ನೋಟಿಸ್ ಸ್ವೀಕರಿಸಿಲ್ಲ ಎಂದು ಈ ಹಿಂದೆ ತಿಳಿಸಿ ಗೊಂದಲ ಮೂಡಿಸಿದ್ದರು. ಆದರೆ, ಖುದ್ದು ಜಾರ್ಜ್ ಅವರೇ ತಮಗೆ ಸಮನ್ಸ್ ತಲುಪಿರುವುದನ್ನು ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.