ಬೆಂಗಳೂರು: ಕೊರೊನಾ ತಡೆಗಟ್ಟಲು ಮಹಾನಗರ ಪಾಲಿಕೆ ಬೂತ್ ಮಟ್ಟದ ಸಮಿತಿಯನ್ನು ರಚಿಸಿದ್ದು, ಅವರ ಕಾರ್ಯವೈಖರಿ ಹೇಗಿರಬೇಕೆಂದು ಆಯುಕ್ತರು ಇಂದು ಸಭೆ ನಡೆಸಿ ಸೂಚನೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ.
ವಾರ್ಡ್ 18ರಲ್ಲಿ ಬೂತ್ ಮಟ್ಟದ ಕಮಿಟಿ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಭೆ ನಡೆಸಿದರು. ಸರ್ಕಾರಿ ಸಿಬ್ಬಂದಿ, ಸ್ವಯಂ ಸೇವಕರನ್ನು ಬಳಸಿಕೊಂಡು ಈ ಕೆಳಗಿನಂತೆ ಕೆಲಸ ನಿರ್ವಹಿಸಲು ಸೂಚನೆ ನೀಡಿದ್ದಾರೆ.
1.ಮನೆ ಮನೆ ಸರ್ವೆ ನಡೆಸಿ, ಪ್ರತಿ ಮನೆಯ ವಯಸ್ಸಾದವರು, ಉಸಿರಾಟದ ಸಮಸ್ಯೆ, ರೋಗ ಲಕ್ಷಣ, ಹಾಗೂ ಇತರ ಖಾಯಿಲೆ ಇರುವವರ ಪಟ್ಟಿ ಮಾಡಿಕೊಳ್ಳಬೇಕು.
2.ಒಬ್ಬ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದರೆ, ಆತ ಹೋಂ ಐಸೋಲೇಷನ್ ಆಗಲು ಮನೆಯ ವ್ಯವಸ್ಥೆಯನ್ನು ಪರಿಶೀಲಿಸುವುದು.
3.ಪಾಸಿಟಿವ್ ಬಂದ ವ್ಯಕ್ತಿಯ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ತಕ್ಷಣ ಪತ್ತೆ ಹಚ್ಚುವುದು.
ಬೂತ್ ಮಟ್ಟದ ಕಮಿಟಿ ಜೊತೆ ಬಿಬಿಎಂಪಿ ಆಯುಕ್ತರ ಸಭೆ 4.ಹೋಂ ಐಸೋಲೇಷನ್ನಲ್ಲಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸಬೇಕು. ಮನೆಗೆ ಹೋಗಿ ಪರೀಕ್ಷಿಸುವ ಬದಲು ಫೋನ್ ಮೂಲಕ ಅಪ್ಡೇಟ್ ತಿಳಿದುಕೊಳ್ಳುವುದು ಉತ್ತಮ.
5.ಪ್ರಾಥಮಿಕ ಸಂಪರ್ಕಿತರನ್ನು ಮನೆಯಿಂದ ಹೊರಗೆ ಸುತ್ತಾಡದಂತೆ, ಹೋಂ ಕ್ವಾರಂಟೈನ್ಗೆ ಒಳಪಡಿಸಿ ನಿಗಾ ವಹಿಸುವುದು.
ಕಂಟೇನ್ಮೆಂಟ್ ವಲಯಗಳ ಸರ್ವೆ ಹೇಗೆ?
1. ಕಂಟೇನ್ಮೆಂಟ್ ವಲಯದಲ್ಲಿ ಇರುವ ಮನೆಗಳಿಗೆ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಉಚಿತ ರೇಷನ್ ಯಾರಿಗೆ ತಲುಪಿಸಬೇಕು, ಹಣ ಪಡೆದು ಹೋಂ ಡೆಲಿವರಿ ಯಾರಿಗೆ ಮಾಡಬೇಕು ಎಂದು ಪಟ್ಟಿ ಸಿದ್ಧಮಾಡಬೇಕು.
2. ಮೆಡಿಕಲ್ ಅಗತ್ಯ ಆಥವಾ ಆರೋಗ್ಯ ವಿಚಾರವಾಗಿ ಕಂಟೇನ್ಮೆಂಟ್ ಝೋನ್ನಿಂದ ಹೊರಗೆ ಹೋಗಬೇಕಾದ ಅಗತ್ಯ ಇರುವವರನ್ನು ಗುರುತಿಸಬೇಕು.
3. ಕಂಟೇನ್ಮೆಂಟ್ ವಲಯದಲ್ಲಿದ್ದು, ಹೊರಗೆ ಹೋಗಲೇಬೇಕಾದ ಅಗತ್ಯ ಸೇವೆಗಳಾದ ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ವಾಸಿಸುತ್ತಿದ್ದರೆ ಅವರನ್ನು ಗುರುತಿಸಬೇಕು.
4.ಇತರ ಕಚೇರಿ ಕೆಲಸದವರಿಗೆ ಅವರ ಕಚೇರಿಗಳಿಗೆ ಓಡಾಟವನ್ನು ನಿರ್ಬಂಧಿಸಲು ಹಾಗೂ ಕಚೇರಿಗೆ ಹೋಗುವುದರಿಂದ ವಿನಾಯಿತಿ ಪಡೆಯಲು ಕಂಟೇನ್ಮೆಂಟ್ ವಲಯದ ಸರ್ಟಿಫಿಕೇಟ್ ಕೊಡಬೇಕು.
ಈ ವ್ಯವಸ್ಥೆಗಳನ್ನು ಕೈಗೊಳ್ಳಲು ಬೂತ್ ಮಟ್ಟದ ಸಮಿತಿಗಳಿಗೆ ಆಯುಕ್ತರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.