ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗುತ್ತಿದೆ, ನಾಯಕರೆಲ್ಲಾ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಂದುಕೊಳ್ಳುವ ಸಂದರ್ಭಕ್ಕೆ ಸರಿಯಾಗಿ ಏನಾದರೂ ಒಂದು ಅಚಾತುರ್ಯ ನಡೆಯುತ್ತದೆ. ಇದಕ್ಕೆ ಮೊನ್ನೆ ನಡೆದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭವೇ ಸಾಕ್ಷಿಯಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಇದ್ದೇ ಇದೆ ಎನ್ನುವುದಕ್ಕೆ ಆಗಾಗ ಸಾಕ್ಷಿ ದೊರೆಯುತ್ತಿರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷವನ್ನು ಒಂದೆಡೆ ಸಂಘಟಿಸುತ್ತಿದ್ದರೆ ಇನ್ನೊಂದೆಡೆ ಸಿದ್ದರಾಮಯ್ಯ ತಮ್ಮದೇ ಆದ ತಂಡ ಕಟ್ಟಿಕೊಂಡು ಪ್ರತ್ಯೇಕವಾಗಿ ಕಾರ್ಯಯೋಜನೆ ರೂಪಿಸುತ್ತಿರುತ್ತಾರೆ. ಇನ್ನು ಉಳಿದ ನಾಯಕರದ್ದಂತೂ ಹೇಳುವುದೇ ಬೇಡ. ಒಟ್ಟಾರೆ ಕಾಂಗ್ರೆಸ್ ಪಕ್ಷದ ಚಟುವಟಿಕೆ ಮನೆಯೊಂದು ಹತ್ತಾರು ಬಾಗಿಲು ಅನ್ನುವಂತಾಗಿದೆ.
ಸಿದ್ದರಾಮಯ್ಯ ಬಣ ಅವಕಾಶ ಸಿಕ್ಕಾಗೆಲ್ಲಾ ಪ್ರತಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನನ್ನು ಅಟ್ಟಕ್ಕೇರಿಸುವ ಕಾರ್ಯ ಮಾಡುತ್ತಾರೆ. ಇನ್ನೊಂದೆಡೆ ಪಕ್ಷದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕೊಂಡಾಡುವ ಕಾರ್ಯ ಆಗುತ್ತದೆ. ಇದೇ ರೀತಿ ಮೊನ್ನೆ ಕೂಡ ಆಗಿದ್ದು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸಾಕಷ್ಟು ಸಿಳ್ಳೆ, ಚಪ್ಪಾಳೆ ಬಡಿದು ಸ್ವಾಗತಿಸಿದ್ದರು. ಭಾಷಣ ಮಾಡಲು ವೇದಿಕೆ ಏರಿದಾಗಲೂ ಅದೇ ಬೆಂಬಲ ಸಿಕ್ಕಿತ್ತು. ಆದರೆ ಕೆಲ ಕ್ಷಣ ಮಾತನಾಡಿ ಸಿದ್ದರಾಮಯ್ಯ ವೇದಿಕೆಯಿಂದ ಇಳಿದರು. ಕಾರಣ ಅವರಿಗೆ ಮಾತನಾಡುವ ಅವಕಾಶವನ್ನು ತಡೆಯಲಾಯಿತು.
ಡಿಕೆಶಿ ಅಭಿಮಾನಿಗಳು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಭಾವಚಿತ್ರ ಹಿಡಿದು, ವೇದಿಕೆ ಬಳಿ ಜೈಕಾರ ಕೂಗಿದರು. ಇದರಿಂದ ಕಿರಿಕಿರಿಗೆ ಒಳಗಾದ ಸಿದ್ದರಾಮಯ್ಯ ವೇದಿಕೆಯಿಂದ ಕೆಳಗಿಳಿದರು. ಅವರಿಗೆ ವೇದಿಕೆ ಮೇಲೆ ಸೂಕ್ತ ಗೌರವವೂ ಪಕ್ಷದ ಕಡೆಯಿಂದ ಸಿಗಲಿಲ್ಲ ಎಂಬ ಆರೋಪವನ್ನು ಅವರ ಆಪ್ತರು ಹೇಳಿಕೊಂಡಿದ್ದಾರೆ. ಸಮಾರಂಭ ಮುಕ್ತಾಯವಾಗುವುದಕ್ಕೂ ಕಾಯದ ಸಿದ್ದರಾಮಯ್ಯ ಪಕ್ಕದಲ್ಲೇ ನಡೆಯುತ್ತಿದ್ದ ಪುನಿತ್ ರಾಜ್‌ಕುಮಾರ್ ನುಡಿನಮನ ಕಾರ್ಯಕ್ರಮದತ್ತ ತೆರಳಿದ್ದರು.
ಜಮೀರ್ ಕಡೆಗಣನೆ..?
ಪಕ್ಷದ ಕೆಲ ನಾಯಕರೇ ಹೇಳುವ ಪ್ರಕಾರ ಸಿದ್ದರಾಮಯ್ಯ ಹಾಗೂ ಅವರ ಬಣವನ್ನು ಮೂಲ ಕಾಂಗ್ರೆಸ್ ನಾಯಕರು ಸಹಿಸುತ್ತಿಲ್ಲ. ಇದರಿಂದಾಗಿಯೇ ಎಲ್ಲಿಯೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೆಸರು ಪ್ರಸ್ತಾಪವಾಗಿಲ್ಲ. ದಿಲ್ಲಿಯಲ್ಲಿದ್ದ ಜಮೀರ್ ಸಮಾರಂಭಕ್ಕೆ ಆಹ್ವಾನಿತರಾಗಿಲ್ಲ ಎಂಬ ಕಾರಣಕ್ಕೂ ಅವರ ಅಭಿಮಾನಿಗಳು ಭಾವಚಿತ್ರ ಹಿಡಿದು ವೇದಿಕೆ ಮುಂಭಾಗ ಘೋಷಣೆ ಕೂಗಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ ವಿಷಯ ಏನೇ ಇರಲಿ ಪಕ್ಷದ ಕಾರ್ಯಕ್ರಮದಲ್ಲಿ ಹಿಂದಿನಿಂದಲೂ ಸಿದ್ದರಾಮಯ್ಯಗೆ ಅವಮಾನ ಮಾಡುವ ಕಾರ್ಯ ಆಗುತ್ತಲೇ ಇದೆ.