ಬೆಂಗಳೂರು:ಬಿಟ್ ಕಾಯಿನ್ ಹಗರಣ ವಿಚಾರ ನಾನು ಪ್ರಸ್ತಾಪಿಸಿದ ನಂತರ ಎಫ್ಐಆರ್ ಆಗಿದೆ. ಅಲ್ಲಿವರೆಗೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 330 ರ ಅಡಿ, ಬಿಟ್ ಕಾಯಿನ್ ಅಂತಾರಾಷ್ಟ್ರೀಯ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ವೆಂಕಟೇಶ್, ನಮ್ಮಲ್ಲಿ ಬಲಿಷ್ಠ ಪೊಲೀಸ್ ಬಲ ಇದೆ. ಆದರೆ ಯಾಕೆ ತನಿಖೆ ತ್ವರಿತವಾಗಿ ನಡೆಯುತ್ತಿಲ್ಲ. ಕೊಟ್ಯಂತರ ರೂ. ಮೌಲ್ಯದ ಭ್ರಷ್ಟಾಚಾರ ಆಗಿದೆ. ಸಿಬಿಐ ಇಲ್ಲವೇ ಬೇರೆ ತನಿಖಾ ಸಂಸ್ಥೆ ಮೂಲಕ ವಿಚಾರಣೆ ನಡೆಸುವ ಜತೆಗೆ ಇಲ್ಲಿ ಸರ್ಕಾರ ಸಹ ಬೇರೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಬಿಟ್ ಕಾಯಿನ್ ಕಳ್ಳತನ ಸಂಬಂಧ ದೂರು ದಾಖಲಾಗಿದೆ. ಸರ್ಕಾರದ ದುಡ್ಡು 11.50 ಕೋಟಿ ರೂ ಕಳ್ಳತನ ಆಗಿದೆ. ಹ್ಯಾಕ್ ಆಗಿರುವ ಕಾಯಿನ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇಲ್ಲಿ ಆಗಿದ್ದರೆ ಅದಕ್ಕೆ ದಾಖಲೆ ಒದಗಿಸಿ. ಇಲ್ಲಿ ಕೆಲವರು ಬಿಟ್ ಕಾಯಿನ್ ವಿಚಾರವಾಗಿ ವಂಚನೆ ಮಾಡಿದ್ದಾರೆ. ಸರ್ಕಾರದ ಹಣ ವಂಚನೆ ಆಗಿದ್ದರಲ್ಲಿ 1 ಕೋಟಿಗೂ ಅಧಿಕ ಮೌಲ್ಯ ಮುಟ್ಟುಗೋಲು ಹಾಕಿಕೊಂಡಿದ್ದೇವೆ.
ಉಳಿದ ಹಣ ಹಂತ ಹಂತವಾಗಿ ವಸೂಲು ಮಾಡುತ್ತೇವೆ. ಬಿಟ್ ಕಾಯಿನ್ ನೀಡುವುದಾಗಿ ವಂಚಿಸಿದವರನ್ನೂ ಬಂಧಿಸಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಚಾರ್ಜ್ ಶೀಟ್ ಹಾಕಿದ್ದೇವೆ. ಮಾಹಿತಿ ಎಲ್ಲ ನಮ್ಮ ಬಳಿ ಇದೆ. ರಾಬಿನ್ ನೀಡಿದ ಹೇಳಿಕೆ ಪ್ರಸ್ತಾಪಿಸಿದರೆ ತುಂಬಾ ಮಂದಿಗೆ ಅವಮಾನ ಆಗಲಿದೆ. ಕೋರ್ಟ್ನಲ್ಲಿ ವಿಚಾರ ಇದೆ. ಅದಕ್ಕಾಗಿ ಪ್ರಸ್ತಾಪಿಸುವುದಿಲ್ಲ ಎಂದರು.
ಓದಿ:ನೀವು ಹಿರಿಯ ನಾಗರಿಕರಾ? ಆರೋಗ್ಯವಿಮೆ ಪಡೆಯಲು ಬಯಸಿದ್ದೀರಾ?: ಹಾಗಾದರೆ ಈ ಎಲ್ಲ ಅಂಶಗಳನ್ನು ಗಮನಿಸಿ!
ಹೊಸ ಪ್ರಕರಣ ಯಾವುದಾದರೂ ಇದ್ದರೆ ತಾವು ದಾಖಲೆ ನೀಡಿದಲ್ಲಿ ಆ ಸಂಬಂಧ ಸೂಕ್ತ ತನಿಖೆ ನಡೆಸುತ್ತೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಆದ ಬಿಟ್ ಕಾಯಿನ್ ಕಳ್ಳತನ ಇದಲ್ಲ. ಫರ್ಜಿಕೆಫೆ ಗಲಾಟೆ ಸಂದರ್ಭ ಶ್ರೀಕಿ ಸಿಕ್ಕಿದ್ದ. ಆಗ ಸೂಕ್ತ ತನಿಖೆ ಆಗಿದ್ದರೆ ಇಷ್ಟು ಮುಂದುವರಿಯುತ್ತಿರಲಿಲ್ಲ. ವಿಚಾರಣೆ ಮಾಡದೇ ಬಿಟ್ಟು, ಜಾಮೀನು ಸಿಗುವಂತೆ ಮಾಡಿದ್ದರೆ ನಮ್ಮ ತಪ್ಪು ಅನ್ನಬಹುದಿತ್ತು. ಆದರೆ ನಮ್ಮ ಪ್ರಯತ್ನ ನಡೆಸಿದ್ದೇವೆ ಎಂದರು.
ಸರ್ಕಾರದ ಹಣ ವಾಪಸ್ ತರಿಸಲು ಪ್ರಯತ್ನ ನಡೆಸಿದ್ದೇವೆ. ಹಂತ ಹಂತವಾಗಿ ತರಿಸುತ್ತೇವೆ. ಸಂಶಯಬೇಡ ಅಂದ ಗೃಹಸಚಿವರಿಗೆ ಯು.ಬಿ. ವೆಂಕಟೇಶ್ ಪ್ರಶ್ನೆ ಮಾಡಿ ಹಣ ವಸೂಲಿಯ ಕಾಲಮಿತಿ ನೀಡಿ ಎಂದರು. ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಇದೊಂದು ಗಂಭೀರ ಅಪರಾಧವಾಗಿದೆ. ಸೂಕ್ತ ತನಿಖೆ ನಡೆಯಲಿ. ಇದರ ಹಿಂದೆ ಯಾರಿದ್ದಾರೆ ಎಂಬ ವಿವರ, ಹೆಸರು ಹೊರಗೆ ಬರಲಿ ಎಂದು ಒತ್ತಾಯಿಸಿದರು.