ಬೆಂಗಳೂರು: ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಮರುನಾಮಕರಣವಾಯಿತಾದರೂ ಉತ್ತರ ಕರ್ನಾಟಕ ಭಾಗದ ಚಿತ್ರಣ ಬದಲಾಗಿಲ್ಲ.
ಈ ಭಾಗದ ಅಭಿವೃದ್ಧಿ ಹಾಗು ಆಗಬೇಕಿರುವ ನಾನಾ ಕಲ್ಯಾಣ ಕೆಲಸಗಳ ಬಗ್ಗೆಯೇ ಹೆಚ್ಚು ಚರ್ಚೆ ಆಗಬೇಕು ಎಂಬ ಉದ್ದೇಶದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆರಂಭಿಸಲಾಗಿದೆ. ಆದರೆ ಇದುವರೆಗೆ ನಡೆದ 9 ಅಧಿವೇಶನಗಳಿಂದ ನಿರೀಕ್ಷಿತ ಉದ್ದೇಶ ಮಾತ್ರ ಈಡೇರಿಲ್ಲ.
ಉತ್ತರ ಕರ್ನಾಟಕದ ಜನಕಲ್ಯಾಣ ಯೋಜನೆಗಳು, ಈ ಭಾಗದ ಅಭಿವೃದ್ಧಿ, ಇಲ್ಲಿನ ಸಮಸ್ಯೆಗಳ ಕುರಿತಾಗಿಯೇ ಚರ್ಚೆಗಳು ಇರಬೇಕು ಎಂಬ ಆಶಯದೊಂದಿಗೆ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನವನ್ನು ಕುಂದಾ ನಗರಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಅಗತ್ಯ ಅನುದಾನ ನೀಡಿದ್ದ ಬಿಎಸ್ವೈ:
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಿಸುವ ಕನಸು ಮೊಳಕೆಯೊಡೆದಿದ್ದು ಧರಂಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅದಕ್ಕೆ ಶಂಕು ಸ್ಥಾಪನೆ ಮಾಡಿದರು. ನಂತರ ಸಿಎಂ ಆದ ಬಿ.ಎಸ್.ಯಡಿಯೂರಪ್ಪ ಅಗತ್ಯ ಅನುದಾನ ನೀಡಿದ್ದರು. ಆದರೆ, ಅದು ಉದ್ಘಾಟನೆ ಆಗಿದ್ದು ಮಾತ್ರ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ.
ಹುಸಿಯಾಗುತ್ತಿರುವ ನಿರೀಕ್ಷೆ:
438 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವಿಧಾನಸೌಧದಲ್ಲಿ ಈವರೆಗೆ ಅಧಿವೇಶನ ನಡೆದಿರುವುದು ಕೇವಲ 60 ದಿನ ಮಾತ್ರ. ಇದಕ್ಕಾಗಿ ಆದ ವೆಚ್ಚ ಮಾತ್ರ ಬರೋಬ್ಬರಿ 80 ಕೋಟಿಯನ್ನು ದಾಟಿದೆ. ಆದರೆ ಉತ್ತರ ಕರ್ನಾಟದ ನಿರೀಕ್ಷೆ ಮಾತ್ರ ಹುಸಿಯಾಗುತ್ತಲೇ ಬರುತ್ತಿದೆ.
2019ರ ನೆರೆಹಾನಿ, 2020 ಕೋವಿಡ್ ಕಾರಣಕ್ಕೆ ಅಲ್ಲಿ ಅಧಿವೇಶನ ನಡೆದಿರಲಿಲ್ಲ. 2 ವರ್ಷದ ನಂತರ ಈಗ ಮತ್ತೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಈ ಬಾರಿಯಾದರೂ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳು, ನೀರಾವರಿ ಯೋಜನೆಗಳು, ಉದ್ಯೋಗಾವಕಾಶಗಳು, ನನೆಗುದಿಗೆಗೆ ಬಿದ್ದಿರುವ ಯೋಜನೆಗಳು, ರೈತರ ಸಂಕಷ್ಟಗಳ ಬಗ್ಗೆ ಪೂರ್ಣಪ್ರಮಾಣದಲ್ಲಿ ಬೆಳಕು ಚೆಲ್ಲುವ ಕೆಲಸ ಅಧಿವೇಶನದಲ್ಲಿ ನಡೆಯಲಿದೆಯಾ? ಎನ್ನುವ ನಿರೀಕ್ಷೆ ಉತ್ತರ ಕರ್ನಾಟಕ ಭಾಗದ ಜನರದ್ದಾಗಿದೆ.
ರೈತರ ನೆರವಿಗೆ ಧಾವಿಸುವಂತೆ ಆಗ್ರಹ:
ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ರೈತರು ಪೂರೈಕೆ ಮಾಡಿದ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳ ಮಾಲಿಕರು ಸರಿಯಾಗಿ ದರ ನೀಡುತ್ತಿಲ್ಲ. ಜತೆಗೆ ಹಣವನ್ನೂ ಪಾವತಿ ಮಾಡುತ್ತಿಲ್ಲ. ಇದರಿಂದ ಕಬ್ಬು ಬೆಳೆಗಾರರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ರೈತರು ಹೋರಾಟ ಮಾಡುತ್ತಲೇ ಇದ್ದಾರೆ. ಇದು ಪ್ರತಿ ವರ್ಷವೂ ಎದುರಾಗುವ ಸಮಸ್ಯೆ. ಆದರೆ ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಕೆಲಸ ಸಮರ್ಪಕವಾಗಿ ಬೆಳಗಾವಿ ಅಧಿವೇಶನದಲ್ಲಿ ಆಗುತ್ತಿಲ್ಲ.
ಕಬ್ಬು ಬೆಳೆಗಾರರು ಮಾತ್ರವಲ್ಲ, ಈ ಭಾಗದಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾದ ಈರುಳ್ಳಿ, ಹೆಸರು, ಮೆಕ್ಕೆಜೋಳ, ತೊಗರಿ, ಮೆಣಸಿನಕಾಯಿ, ಹತ್ತಿ, ಶೇಂಗಾ, ಜೋಳ ಬೆಳೆಯುವ ರೈತರ ನೆರವಿಗೂ ಸರ್ಕಾರ ಧಾವಿಸಬೇಕಿದೆ. ಈ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಜತೆಗೆ ನಿಗದಿತ ದರವನ್ನು ಒದಗಿಸಬೇಕಾದ ಅನಿವಾರ್ಯತೆ ಇದ್ದರೂ ಅದರ ಬಗ್ಗೆ ಗಂಭೀರ ಚರ್ಚೆಗಳು ನಡೆದು ಪರಿಹಾರ ಸಿಗುತ್ತಿಲ್ಲ.
ಕಳಸಾ ಬಂಡೂರಿಯತ್ತ ಗಮನಹರಿಸಿ:
ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ವರದಾ, ಹಿರಣ್ಯ ಕೇಶಿ, ವೇದಗಂಗಾ, ದೂದಗಂಗಾ, ತುಂಗಭದ್ರಾ ನದಿಗಳಿವೆ. ಈ ನದಿ ಪಾತ್ರಗಳ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಣಾಮಕಾರಿಯಾಗಿ ಆಗಬೇಕಿದೆ.
ಸರ್ಕಾರ ಕಾವೇರಿಗೆ ಮೇಕೆದಾಟುವಿನಲ್ಲಿ ಮತ್ತೊಂದು ಅಣೆಕಟ್ಟು ಮಾಡಲು ಉತ್ಸುಕವಾಗಿದೆ. ಆದರೆ, ಅದೇ ಉತ್ಸಾಹವನ್ನು ಕಳಸಾ ಬಂಡೂರಿಯತ್ತ ಗಮನ ಹರಿಸಲು ತೋರಬೇಕಿದೆ. ಅಲಮಟ್ಟಿ ಜಲಾಶಯದಲ್ಲಿ ಮಳೆಗಾಲದ ವೇಳೆ ಅಂದಾಜು ನಿತ್ಯ 1.5 ಲಕ್ಷ ಕ್ಯೂಸೆಕ್ ಹೊರ ಹರಿವು ಇರುತ್ತದೆ. ಇದೇ ನೀರಿನಿಂದ ಮತ್ತೊಂದು ಯೋಜನೆ ರೂಪಿಸುವ ತುರ್ತು ಕೆಲಸವಾಗಬೇಕಿದೆ ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಅಧಿವೇಶದಲ್ಲಿ ವಿಸ್ತೃತವಾದ ಚರ್ಚೆಗಳು ಮಾತ್ರ ನಡೆಯುತ್ತಿಲ್ಲ.
ಪ್ರಮುಖ ಇಲಾಖೆಗಳ ಸ್ಥಳಾಂತರಕ್ಕೆ ಆಗ್ರಹ:
ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ಇಲಾಖೆಗಳನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಬೇಕು. ಮುಖ್ಯವಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿರುವ ಇಲಾಖೆಗಳು ಇಲ್ಲಿಗೆ ಬರಬೇಕು ಎನ್ನುವ ಕೂಗು ಮೊದಲಿನಿಂದಲೂ ಇದೆ. ಈ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದರು. ಆದರೆ, ಅನುಷ್ಠಾನ ಮಾತ್ರ ಶೂನ್ಯ.
ಪ್ರಮುಖ ಬೇಡಿಕೆಗಳು ಹೀಗಿವೆ..
- ಬೆಂಗಳೂರಿನಲ್ಲಿರುವ ಐಟಿ- ಬಿಟಿ ಕಂಪನಿಗಳು ಉತ್ತರ ಕರ್ನಾಟಕ ಭಾಗದ ಕಡೆಗೆ ಒಲವು ತೋರುವಂತೆ ವಿಶೇಷ ಪ್ಯಾಕೇಜ್‌ಗಳನ್ನು ನೀಡಬೇಕು.
- ಹುಬ್ಬಳ್ಳಿ-ಧಾರವಾಡದ ನಡುವೆ ಲೋಕಲ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು.
- ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚು ಹತ್ತಿ ಬೆಳೆಯುತ್ತಿರುವುದರಿಂದ ಜವಳಿ ಉದ್ಯಮಕ್ಕೆ ಉತ್ತೇಜನ ನೀಡಬೇಕು.
- ಉಡಾನ್ ಯೋಜನೆ ಅಡಿ ಬೆಳಗಾವಿ, ಹುಬ್ಬಳ್ಳಿಯಲ್ಲಿ ಈಗಾಗಲೇ ನಾನಾ ವಿಮಾನ ಸೇವೆಗಳು ಆರಂಭಗೊಂಡಿವೆ. ಇದನ್ನೇ ಬಳಸಿಕೊಂಡು ಇಲ್ಲಿನ ರೈತರು ಬೆಳೆಯುತ್ತಿರುವ ಸಂಬಾರ್ ಬೆಳೆಗಳು, ತೋಟಗಾರಿಕೆ ಬೆಳೆಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆ ಒದಗಿಸುವ ಕೆಲಸ ಮಾಡಬೇಕು.
- ಈ ಭಾಗದ ಕೆಲವು ರೈತರು ಗೋವಾ, ಕೇರಳ ರಾಜ್ಯಗಳಿಗೆ ದುಡಿಯಲು ಗುಳೆ ಹೋಗುತ್ತಿದ್ದಾರೆ. ಅವರಿಗೆ ಇಲ್ಲೇ ಉದ್ಯೋಗ ಸಿಗುವಂತಾಗಬೇಕು ಎನ್ನುವ ಬೇಡಿಕೆ ಇದೆ.
ಆದರೆ ಈ ಬಗ್ಗೆ ಸಮರ್ಪಕವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗಳೇ ನಡೆಯದಿರುವುದು ಬೇಸರದ ಸಂಗತಿ. ಯಾವುದಾದರೂ ಪ್ರಚಲಿತ ವಿದ್ಯಮಾನಗಳ ಸಮಸ್ಯೆಗಳನ್ನು ಹಿಡಿದುಕೊಂಡು ಸದನದಲ್ಲಿ ಚರ್ಚೆ, ಗದ್ದಲ, ಧರಣಿಯಂತಹ ಘಟನೆಗಳ ಬೆಳಗಾವಿ ಅಧಿವೇಶನದಲ್ಲಿಯೂ ನಡೆಯುವ ಕಾರಣಕ್ಕೆ ಬೆಳಗಾವಿಯಲ್ಲಿ ನಡೆಸುತ್ತಿರುವ ಅಧಿವೇಶನದ ಉದ್ದೇಶ ಈಡೇರುತ್ತಿಲ್ಲ. ಈ ಬಾರಿಯಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಲು ಅಧಿವೇಶನದಲ್ಲಿ ಹೆಚ್ಚು ಸಮಯ ಸಿಗಲಿದೆಯಾ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಮೋದಿ ಸರ್ಕಾರ ರೈತರು ಮತ್ತು ಜನಸಾಮಾನ್ಯರ ಕುರಿತ ಸಂವೇದನೆ ಕಳೆದುಕೊಂಡಿದೆ : ಸೋನಿಯಾ ಗಾಂಧಿ