ಬೆಂಗಳೂರು: ಮಾಜಿ ಸಚಿವ ಜಿ.ಟಿ. ದೇವೇಗೌಡರು ಕ್ಷೇತ್ರದ ಕೆಲಸಕ್ಕೆ ಹೋಗಿದ್ದಾಗಿ ಹೇಳಿದ್ದಾರೆ, ನಮ್ಮ ಪಕ್ಷದಿಂದ ಯಾರೂ ಓಡಿ ಹೋಗುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದೇವೇಗೌಡರು, ಕೆಲವು ಸನ್ನಿವೇಶಗಳಲ್ಲಿ ನಾಯಕರು ಮಾತನಾಡಿರುವುದನ್ನು ಮಾಧ್ಯಮಗಳು ಹೆಚ್ಚು ಪ್ರಕಾಶಮಾನವಾಗಿ ಬಿತ್ತರಿಸುತ್ತಿವೆ. ಸಾ.ರಾ. ಮಹೇಶ್ ಹಾಗೂ ಜಿ.ಟಿ. ದೇವೇಗೌಡರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಇರಬಹುದು, ಅಷ್ಟು ಮಾತ್ರಕ್ಕೆ ಪಕ್ಷ ಬಿಡುತ್ತಾರೆ ಎನ್ನುವುದು ಸರಿಯಲ್ಲ. ಅದೇ ರೀತಿ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಅವರು ಪಕ್ಷ ತೊರೆದು ಪರಮೇಶ್ವರ್ ಅವರಿಗೆ ಕ್ಷೇತ್ರ ಬಿಟ್ಟು ಕೊಡುತ್ತಾರೆ ಎಂಬ ವದಂತಿ ಹಬ್ಬಿದೆ. ಯಾರೂ ಸಹ ಪಕ್ಷ ಬಿಟ್ಟು ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಚುನಾವಣೆ ಯಾವಾಗ ಬೇಕಾದರೂ ಬರಬಹುದು, ಹಾಗಾಗಿ ಎಲ್ಲ ಜಿಲ್ಲೆಯ ಪದಾಧಿಕಾರಿಗಳ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಸೆ.16 ರಿಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಸಂಘಟನೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತಿಳಿಯಲು ಸಭೆ ನಡೆಯಲಿದೆ. ನಂತರ ತಂಡಗಳನ್ನು ರಚಿಸಿ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮೊನ್ನೆ, ನಿನ್ನೆ ಸಭೆ ನಡೆಸಿದ್ದಾರೆ, ನಮ್ಮ ರಾಜ್ಯದವರು ಹೋಗಿದ್ದಾರೆ. ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆ ನಡೆಯಲಿದೆ. ನಮ್ಮ ರಾಜ್ಯದಲ್ಲೂ ಬಂದರೂ ಬರಬಹುದು. ಬಿಜೆಪಿ ಹೈಕಮಾಂಡ್ ಅಭಿಪ್ರಾಯ ಗೊತ್ತಾಗುತ್ತಿಲ್ಲ. ಇನ್ನು ಅನರ್ಹ ಶಾಸಕರ ಬಗ್ಗೆ ಆಸಕ್ತಿ ಇಲ್ಲ, ಹಾಗಾಗಿ ಚುನಾವಣೆ ಮಾಡಬಹುದು ಎಂಬ ಭಾವನೆ ಇದೆ. ನಿಖರವಾಗಿ ಗೊತ್ತಿಲ್ಲ, ನಾವು ಸಹ ಸಿದ್ದತೆಮಾಡಿಕೊಳ್ಳುತ್ತಿದ್ದೇವೆ ಎಂದರು.