ಕರ್ನಾಟಕ

karnataka

ETV Bharat / city

ಶಾಸಕರಿಗಿಲ್ಲ ನಿರ್ಬಂಧ, ರೆಸಾರ್ಟ್, ಹೋಟೆಲ್ ಖಾಲಿ ಖಾಲಿ: ಕೈ‌ಚಲ್ಲಿದರಾ ಕಾಂಗ್ರೆಸ್ ನಾಯಕರು? - undefined

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಕಾಂಗ್ರೆಸ್ ನಾಯಕರು ಕಳೆದ ಶನಿವಾರದಿಂದ ಪಕ್ಷದ ಶಾಸಕರು ಬಿಜೆಪಿ‌ ಕೈಗೆ ಸಿಗದಂತೆ ತಡೆಯಲು ತಾಜ್ ಹೋಟೆಲ್ ಹಾಗೂ ದೇವನಹಳ್ಳಿಯ ಪ್ರಕೃತಿ ರೆಸಾರ್ಟ್​ನಲ್ಲಿ ಇರಿಸಿದ್ದರು. ಆದರೆ ಇಂದು ಇದ್ದಕ್ಕಿದ್ದಂತೆ ಶಾಸಕರೆಲ್ಲರಿಗೂ ಮುಕ್ತವಾಗಿ ಓಡಾಟ ನಡೆಸಲು ಅವಕಾಶ ನೀಡಿದ್ದಾರೆ.

Congress

By

Published : Jul 20, 2019, 11:03 PM IST

ಬೆಂಗಳೂರು:ಆಪರೇಷನ್ ಕಮಲದಿಂದ ಶಾಸಕರನ್ನು‌ ರಕ್ಷಿಸಲು ರೆಸಾರ್ಟ್ ರಾಜಕೀಯ ಆರಂಭಿಸಿದ್ದ ಕಾಂಗ್ರೆಸ್ ನಾಯಕರು ಇದೀಗ ತನ್ನ ಶಾಸಕರನ್ನು ಮುಕ್ತವಾಗಿ ಇರಲು ಅವಕಾಶ ಮಾಡಿಕೊಡುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದ್ದಾರಾ ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ನಾಯಕರು ಕಳೆದ ಶನಿವಾರದಿಂದ ಪಕ್ಷದ ಶಾಸಕರು ಬಿಜೆಪಿ‌ ಕೈಗೆ ಸಿಗದಂತೆ ತಡೆಯಲು ತಾಜ್ ಹೋಟೆಲ್ ಹಾಗೂ ದೇವನಹಳ್ಳಿಯ ಪ್ರಕೃತಿ ರೆಸಾರ್ಟ್​ನಲ್ಲಿ ಇರಿಸಿದ್ದರು. ಕೇಸರಿ ಪಾಳಯದ ಪ್ರಭಾವಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ಇದ್ದಕ್ಕಿದ್ದಂತೆ ಶಾಸಕರೆಲ್ಲರಿಗೂ ಮುಕ್ತವಾಗಿ ಓಡಾಟ ನಡೆಸಲು ಅವಕಾಶ ನೀಡಿದ್ದಾರೆ.

ಯಾವುದೇ ನಿರ್ಬಂಧವಿಲ್ಲದೇ ತಮ್ಮ ಕ್ಷೇತ್ರಗಳತ್ತ ತೆರಳಲು, ಬೆಂಗಳೂರಿನಲ್ಲಿ ಶಾಪಿಂಗ್​ಗೆ, ಮಗಳ ಹುಟ್ಟುಹಬ್ಬ ಆಚರಣೆ... ಹೀಗೆ ವಿವಿಧ ಕಾರಣಗಳನ್ನು ಹೇಳಿ ರೆಸಾರ್ಟ್​ನಿಂದ ಕೆಲ ಶಾಸಕರು ಹೊರ ನಡೆದಿದ್ದಾರೆ. ಪಕ್ಷದ ಮುಖಂಡರೂ ಸಹ ಅಷ್ಟೇನೂ ಒತ್ತಡ ಹೇರದೆ ಮುಕ್ತ ಅವಕಾಶ ಕೊಟ್ಟಿದ್ದಾರೆ. ಶನಿವಾರ, ಭಾನುವಾರ ಸಾರ್ವತ್ರಿಕ ರಜೆಯ ಕಾರಣ ಕುಟುಂಬದ ಜೊತೆ ಇರುತ್ತೇವೆ. ಸೋಮವಾರ ಅಧಿವೇಶನಕ್ಕೆ ಬರುತ್ತೇವೆ ಎಂದು ಮಾತುಕೊಟ್ಟು ಹೊರನಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್​​ನ 12ಶಾಸಕರನ್ನು ಪರೋಕ್ಷವಾಗಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ರೆಸಾರ್ಟ್​ನಲ್ಲಿದ್ದರೂ ಶಾಸಕ ಶ್ರೀಮಂತ ಪಾಟೀಲರನ್ನು ಸೆಳೆದು ಕೈ ಪಾಳಯದಿಂದ ದೂರ ಸರಿಯುವಂತೆ ಮಾಡಿಸಿದೆ. ಇಷ್ಟಾದರೂ ಬುದ್ದಿ ಕಲಿಯದ ಕಾಂಗ್ರೆಸ್ ನಾಯಕರು‌ ತನ್ನ ಶಾಸಕರನ್ನ ರೆಸಾರ್ಟ್ ವಾಸ್ತವ್ಯದಿಂದ‌ ಬಂಧ ಮುಕ್ತಗೊಳಿಸಿರುವುದು ಕಾಂಗ್ರೆಸ್ ಕೈ ಚಲ್ಲಿದೆಯಾ? ಅಸಹಾಯಕ ಪರಿಸ್ಥಿತಿಗೆ ತಲುಪಿದೆಯಾ ? ಎಂಬ ಮಾತುಗಳು ಕಾಂಗ್ರೆಸ್ ಪಾಳಯದಿಂದಲೇ ಕೇಳಿಬರುತ್ತಿವೆ‌.

ದೇವನಹಳ್ಳಿಯ ರೆಸಾರ್ಟ್​ನಲ್ಲಿದ್ದಾಗಲೇ ಶ್ರೀಮಂತ್ ಪಾಟೀಲ್, ವಿ.ಮುನಿಯಪ್ಪ ಕೈ ನಾಯಕರ ಕಣ್ತಪ್ಪಿಸಿಕೊಂಡು ನಾಪತ್ತೆಯಾಗಿದ್ದರು. ಮುನಿಯಪ್ಪರ‌ನ್ನು ಹುಡುಕಿಕೊಂಡು ವಾಪಾಸ್ ಕರೆತರಲು ಯಶಸ್ವಿಯಾದ ಕಾಂಗ್ರೆಸ್ ಮುಖಂಡರಿಗೆ, ಶ್ರೀಮಂತ್ ಪಾಟೀರನ್ನ ಇದುವರೆಗೂ ಭೇಟಿಯಾಗಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಕಲಿಗಳು ಎಲ್ಲ ಶಾಸಕರನ್ನು ಈಗ ಮುಕ್ತವಾಗಿ ಸಂಚರಿಸಲು ಬಿಟ್ಟಿರುವುದು ಚರ್ಚೆಗೆ ಆಸ್ಪದ ನೀಡಿದಂತಾಗಿದೆ.

ಇಂದು ಕೇವಲ ಎಂಟು ಹತ್ತು ಶಾಸಕರನ್ನು ಬಿಟ್ಟರೆ ಬೇರೆ ಯಾರೂ ತಾಜ್ ವಿವಾಂತದಲ್ಲಿ ಉಳಿದುಕೊಂಡಿಲ್ಲ. ಇನ್ನು ನಾಳೆ ಭಾನುವಾರ ಆಗಿರುವುದರಿಂದ ಇನ್ನಷ್ಟು ಶಾಸಕರು ಹೋಟೆಲ್​ನಿಂದ ಹೊರ ನಡೆಯುವ ಸಾಧ್ಯತೆ ಇದೆ. ಇದೆಲ್ಲ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಕೈಬಿಡಲು ಕಾಂಗ್ರೆಸ್ ಮುಂದಾಗಿದೆಯಾ ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.

For All Latest Updates

TAGGED:

ABOUT THE AUTHOR

...view details