ಬೆಂಗಳೂರು:ಒಂದು ವೇಳೆ ಈಗ ಬಿಜೆಪಿ ಸರ್ಕಾರ ಬಿದ್ದರೆ, ಮತ್ತೆ ಚುನಾವಣೆ ಮಾಡಿದ್ರೂ ಕೂಡಾ ಯಾವುದೇ ಒಂದು ಪಕ್ಷಕ್ಕೂ ಬಹುಮತ ಬರುವುದಿಲ್ಲ. ಬೇಕಾದ್ರೆ ಬರೆದಿಟ್ಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರನ್ನು ಬಹಳ ದಿನ 'ಫೂಲ್' ಮಾಡೋಕೆ ಆಗಲ್ಲ. ಬಿಜೆಪಿ ಸರ್ಕಾರ ಬಿದ್ದು ಮಧ್ಯಂತರ ಚುನಾವಣೆ ಆದರೆ, ಯಾವ ಪಕ್ಷಕ್ಕೂ ಬಹುಮತ ಬರಲ್ಲ ಎಂದು ಮಹಾರಾಷ್ಟ್ರದ ಚುನಾವಣೆಯನ್ನು ಉದಾಹರಣೆ ನೀಡಿದರು.
ಕೆಲವೇ ದಿನಗಳಲ್ಲಿ ಸರ್ಕಾರ ಅಧಿಕಾರ ಕಳೆದುಕೊಂಡರೂ ಆಶ್ಚರ್ಯವಿಲ್ಲ ಎಂದು ನಾನು ಹೇಳಿದ್ದಲ್ಲ. ಬಿಜೆಪಿ ಸಚಿವರೇ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಶಿಸ್ತಿನಿಂದ ಹೇಗೆ ಕೆಲಸ ಮಾಡ್ತಾರೆ? ಎಂದು ಪ್ರಶ್ನಿಸಿದ ಅವರು, ಸರ್ಕಾರದ ಬಗ್ಗೆ ನಾನು ಸಾಫ್ಟ್ ಕಾರ್ನರ್ ಇರಿಸಿಕೊಂಡಿರುವುದು ಯಾಕೆ ಅಂದ್ರೆ, ನೆರೆ ಪೀಡಿತ ಪ್ರದೇಶದ ಪರಿಸ್ಥಿತಿಯನ್ನು ನಾನು ಪ್ರವಾಸ ಮಾಡಿ ಹತ್ತಿರದಿಂದ ಗಮನಿಸಿದ್ದೇನೆ. ರಾಜಕಾರಣ ಮಾಡಿ ಈ ಸರ್ಕಾರ ಅಸ್ಥಿರ ಮಾಡಲು ಹೊರಟರೆ, ನೆರೆ ಪೀಡಿತರ ಕತೆ ಏನು ಎಂಬುದಷ್ಟೇ ನನ್ನ ಆತಂಕ ಎಂದರು.
ನಾನು ಬಿಜೆಪಿ ಬಗ್ಗೆ ಮೃದು ಧೋರಣೆ ತಳೆಯುತ್ತಿದ್ದೇನೆ ಅನ್ನೋ ವರದಿಗಳು ಬರುತ್ತಿವೆ. ಮಾಧ್ಯಮಗಳಲ್ಲಿ ಈ ಬಗ್ಗೆ ಹಲವು ವರ್ಣರಂಜಿತ ವರದಿಗಳು ಪ್ರಸಾರ ಆಗಿದೆ. ಫೋನ್ ಟ್ಯಾಪಿಂಗ್ ವಿಚಾರದಲ್ಲಿ, ಐಎಂಎ ಕೇಸ್ನಲ್ಲಿ ಕುಮಾರಸ್ವಾಮಿ ಫಿಟ್ ಆಗ್ತಾರೆ ಎಂಬ ಭಯದಲ್ಲಿ ಬಿಜೆಪಿ ಬಗ್ಗೆ ಸಾಫ್ಟ್ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಹೇಳಿದರು.
ಈ ಸರ್ಕಾರ ಬಹಳ ದಿನ ಉಳಿಯಲ್ಲ. ನಾನು ಈ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳ್ತೇನೆ. ನಾನು ಬಿಜೆಪಿ ಸರ್ಕಾರ ಬೀಳಿಸಲ್ಲ ಅಂತಾ ಹೇಳಿದ್ದು ಯಾವುದೇ ಸಾಫ್ಟ್ ಕಾರ್ನರ್ನಿಂದ ಅಲ್ಲ. ಟೀಕೆ ಮಾಡೋದ್ರಿಂದ ಮನರಂಜನೆ ಸಿಗುತ್ತೆ ಅಷ್ಟೇ ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಮಾತಿನ ಗುದ್ದು ನೀಡಿದರು.
ದೇಶ ಮತ್ತು ರಾಜ್ಯ ರಾಜಕಾರಣ ಗೊಂದಲಮಯವಾಗಿದೆ. ಕೇಂದ್ರದಲ್ಲಿ ಸುಭದ್ರ ಸರ್ಕಾರ ಇದ್ದರೂ ಆತಂಕದ ಆರ್ಥಿಕ ಸ್ಥಿತಿ ಇದೆ. ರಾಜ್ಯದಲ್ಲಿ ಅತಿವೃಷ್ಟಿ ತಾರಕಕ್ಕೆ ಏರಿದೆ. ಆದರೆ, ಸರ್ಕಾರ ಇದಕ್ಕೆ ತಕ್ಕಂತೆ ವರ್ತನೆ ಮಾಡಲಿಲ್ಲ. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಬಿ ಎಸ್ ಯಡಿಯೂರಪ್ಪ ಹರಸಾಹಸ ಪಟ್ಟು ಅಧಿಕಾರಕ್ಕೆ ಬಂದ್ರು. ಆಗ ಸುರಿದ ಮಳೆ ಯಡಿಯೂರಪ್ಪ ಅವರ ಕಾಲ್ಗುಣ ಅಂದ್ರು. ಆದರೆ, ಮಳೆ ಜಾಸ್ತಿ ಆಗುತ್ತಿದ್ದಂತೆ ಯಡಿಯೂರಪ್ಪ ಅವರೇ, ದೇವರ ಅವಕೃಪೆಗೆ ನಾವು ಒಳಗಾಗಿದ್ದೇವೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.