ಬೆಂಗಳೂರು :ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ಪ್ರಾರಂಭ ಬೇಡ ಎಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಜಿ.ರಘು ಆಚಾರ್ ಪತ್ರ ಬರೆದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ಪ್ರಾರಂಭ ಬೇಡ.. ಜಿ ರಘು ಆಚಾರ್ ರಾಜ್ಯದಲ್ಲಿ ಜುಲೈ 1ರಿಂದ ಶಾಲೆಗಳು ಪುನಾರಂಭ ಮಾಡಲು ಸರ್ಕಾರ ಉದ್ದೇಶಿಸಿರುವುದು ಸರಿಯಷ್ಟೇ.. ಈ ಸಂಬಂಧ ತಾವು ಅಧಿಕಾರಿಗಳ ಸಭೆ ನಡೆಸಿ,ಎಸ್ಡಿಎಂಸಿ ಸಮಿತಿ ಸದಸ್ಯರ ಅಭಿಪ್ರಾಯ ಕೇಳಿರುತ್ತೀರಾ.. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನಜೀವನ ಇನ್ನೂ ಸಾಮಾನ್ಯ ಪರಿಸ್ಥಿತಿಗೆ ಹಿಂತಿರುಗಿಲ್ಲ. ಇಂತಹ ಸನ್ನಿವೇಶದಲ್ಲಿ ಜುಲೈ 1ರ ನಂತರ ಶಾಲೆಗಳನ್ನು ಪುನರಾರಂಭ ಮಾಡಿದ್ದೇ ಆದಲ್ಲಿ ಮಕ್ಕಳ ಮೇಲೆ ಕೋವಿಡ್-19 ಹೆಚ್ಚು ಮಾರಕ ಪರಿಣಾಮ ಬೀರಲಿದೆ ಎನ್ನುವುದು ಗಮನಾರ್ಹ.
ಕೋವಿಡ್-19 ನಿಯಂತ್ರಣಕ್ಕೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಶಾಲೆ ಪುನಾರಂಭ ಆಗುತ್ತಿದ್ದಂತೆ ವ್ಯಾನ್, ಕಾರು, ಆಟೋ, ಬಸ್‌ಗಳಲ್ಲಿ ಮಕ್ಕಳು ಶಾಲೆಗೆ ತೆರಳುವುದು ಅನಿವಾರ್ಯ. ಇಲ್ಲಿಯೂ ಸಹ ಕೋವಿಡ್-19 ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಸಹ ಶಾಲಾ ಆವರಣದಲ್ಲಿ ಮಕ್ಕಳಿಗೆ ವೇಗವಾಗಿಯೇ ಕೋವಿಡ್-19 ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಶಾಲೆಗಳು ಪುನಾರಂಭ ಬೇಕೇ?
ಇನ್ನೂ ಮನೆಯಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು, ಮಕ್ಕಳು ಮೊಬೈಲ್,ಲ್ಯಾಪ್ಟಾಪ್ ಹಾಗೂ ಡೆಸ್ಕ್ಟಾಪ್ ಮೂಲಕ ಕಲಿಯುವುದು ಅನಿವಾರ್ಯವಾಗಿದೆ. ಒಂದರಿಂದ 4ನೇ ತರಗತಿಗಳವರೆಗೆ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅಷ್ಟು ಅಗತ್ಯವಿಲ್ಲ ಎನ್ನುವುದು ನಮ್ಮ ಅನಿಸಿಕೆ. ಅಗತ್ಯವಿದ್ದಲ್ಲಿ ಮಾತ್ರವೇ 5ರಿಂದ ಮೇಲ್ಪಟ್ಟ ತರಗತಿಗಳ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಮಾಡಲಿ.
ಇಲ್ಲವಾದರೆ ಸಣ್ಣ ಮಕ್ಕಳಿಗೆ ಬೇಗ ಕಣ್ಣಿನ ತೊಂದರೆ ಆಗುತ್ತದೆ. ಕೋವಿಡ್-19 ರೋಗದ ತೀವ್ರತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ವಯೋವೃದ್ಧರಿಗೆ ಇದರಿಂದ ತಕ್ಷಣ ತೊಂದರೆ ಆಗುತ್ತದೆ ಎಂದು ವೈದ್ಯರು ಹೇಳಿರುವುದನ್ನ ಗಮನದಲ್ಲಿಟ್ಟುಕೊಂಡು ಕೋವಿಡ್-19 ರೋಗ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳನ್ನ ಪುನಾರಂಭ ಮಾಡಬಾರದು ಎಂದು ಈ ಮೂಲಕ ತಮ್ಮನ್ನು ಕೋರುತ್ತೇನೆ ಎಂದಿದ್ದಾರೆ.