ಬೆಂಗಳೂರು: ಬಿಜೆಪಿಯವರು ಇನ್ನೂ ಎಷ್ಟು ಶಾಸಕರನ್ನ ಬೇಕಾದರೂ ಕರೆದುಕೊಂಡು ಹೋಗಲಿ, ನಮ್ಮಲ್ಲಿ ಉಳಿದಿರುವುದು ಇನ್ನೇನಿದೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಪರೇಷನ್ ಕಮಲ ಕುರಿತು ಡಿ ಕೆ ಶಿವಕುಮಾರ್ ಸ್ಪಷ್ಟನೆ.. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನೊಬ್ಬ ಶಾಸಕ ಅಷ್ಟೇ, ಅದು ಬಿಟ್ಟು ಬೇರೆ ಗೊತ್ತಿಲ್ಲ. ನಮ್ಮ ಶಾಸಕರನ್ನು ಸೆಳೆಯುತ್ತಿದ್ದಾರೆ ಅನ್ನೋದನ್ನ ಪೇಪರ್ನಲ್ಲಿ ಓದಿದ್ದೇನೆ. ಇನ್ನೂ ಎಷ್ಟು ಜನ ಬೇಕೋ ಕರೆದುಕೊಂಡು ಹೋಗಲಿ. ಉಳಿದಿರೋದು ಇನ್ನೇನಿದೆ ಎಂದು ತಿಳಿಸಿದರು.
ಅನರ್ಹ ಶಾಸಕ ಮುನಿರತ್ನ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಮುನಿರತ್ನನನ್ನೂ ನಾನು ಭೇಟಿ ಮಾಡಿಲ್ಲ. ಭೇಟಿ ಮಾಡಿದ್ದಾರೆ ಅನ್ನೋದು ಸುಳ್ಳು. ನಾವು ನಮ್ಮ ಪಕ್ಷದ ಕೆಲಸ ಮಾಡುತ್ತಿದ್ದೇವೆ. ಅವರು ಇನ್ನೂ ಯಾವ ಪಕ್ಷಕ್ಕೆ ಹೋಗ್ತಾರೋ ಗೊತ್ತಿಲ್ಲ. ನನ್ನದೇ ಆದ ರಾಜಕಾರಣವನ್ನ ನಾನು ಮಾಡುತ್ತಿದ್ದೇನೆ. ಅದನ್ನೇ ಮುಂದುವರಿಸುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರಸ್ತುತ ಯಾವ ಸ್ಥಾನವೂ ಖಾಲಿಯಿಲ್ಲ. ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾರೆ. ನಮ್ಮ ಸಿದ್ದರಾಮಯ್ಯ ಸಿಎಲ್ಪಿ ಲೀಡರ್ ಆಗಿದ್ದಾರೆ. ಯಾವ ಸ್ಥಾನವೂ ಖಾಲಿ ಇಲ್ಲ, ನೋಡೋಣ. ಸದ್ಯಕ್ಕೆ ನಾನು ಮಾಜಿ ಸಚಿವ, ಖಾಲಿ ಶಾಸಕನಷ್ಟೇ.. ಈಗ ಕ್ಷೇತ್ರದ ಕಡೆ ಗಮನಹರಿಸುವುದಕ್ಕೆ ಅವಕಾಶ ಸಿಕ್ಕಿದೆ ಎಂದು ವಿವರಿಸಿದರು.